ಉಡುಪಿ, ದಕ್ಷಿಣ ಕನ್ನಡದಲ್ಲಿ ಜನಜೀವನ ಯಥಾಸ್ಥಿತಿ; ವಾಹನಗಳ ಓಡಾಟ
ಬೆಂಗಳೂರು: ಬೆಳಗಾವಿಯಲ್ಲಿ ಸರಕಾರಿ ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಹಲ್ಲೆ ಮಡಿರುವುದನ್ನು ಖಂಡಿಸಿ ಹಾಗೂ ಕರ್ನಾಟಕದಲ್ಲಿ ಎಂಇಎಸ್ ನಿಷೇಧ, ಮೇಕೆದಾಟು, ಕಳಸಬಂಡೂರಿ ಯೋಜನೆಗೆ ಶೀಘ್ರ ಅನುಮತಿ ಸೇರಿದಂತೆ ನಾಡು-ನುಡಿ, ನೆಲ-ಜಲ ವಿಷಯಗಳ ಬೇಡಿಕೆ ಮುಂದಿರಿಸಿಕೊಂಡು ಕನ್ನಡ ಒಕ್ಕೂಟಗಳು ಕರೆ ನೀಡಿದ ಬಂದ್ ಬೆಳಗ್ಗೆ ಆರು ಗಂಟೆಯಿಂದಲೇ ಶುರುವಾಗಿದೆ.
ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು ಬೆಳಗ್ಗೆ ಬೆಂಗಳೂರಿನ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಂಡಿವೆ. ಬೆಳಗಾವಿ, ಮಂಡ್ಯ, ರಾಮನಗರದಲ್ಲಿ ಸಂಪೂರ್ಣ ಬೆಂಬಲ ಸಿಕ್ಕಿದೆ. ಮೈಸೂರು, ಕಲ್ಯಾಣ ಕರ್ನಾಟಕದಲ್ಲಿ ಮಿಶ್ರ ಬೆಂಬಲ ಇದೆ. ಕರಾವಳಿ ಕರ್ನಾಟಕದಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಂದ್‌ಗೆ ಬೆಂಗಳೂರಿನಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬೆಳಗ್ಗೆಯಿಂದಲೇ ಗಸ್ತಿನಲ್ಲಿದ್ದಾರೆ. ಯಾವುದೇ ಮೆರವಣಿಗೆ, ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಪೊಲೀಸರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ. ಬಲವಂತವಾಗಿ ಬಂದ್ ಮಾಡಿಸಿದ್ರೆ ಶಿಸ್ತುಕ್ರಮ ಕೈಗೊಳ್ಳಲಿದ್ದಾರೆ. ಟೌನ್ ಹಾಲ್, ಮೈಸೂರ್ ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್‌ನಲ್ಲಿ ಖಾಕಿ ಅಲರ್ಟ್ ಆಗಿದ್ದು 4 ಎಸಿಪಿ ಸೇರಿದಂತೆ 11 ಇನ್ಸ್‌ಪೆಕ್ಟರ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಪ್ರಮುಖ ಸ್ಥಳದಲ್ಲಿ 65 ಪಿಎಸ್‌ಐ, ನಗರದಲ್ಲಿ ಒಟ್ಟು 1,200 ಪೊಲೀಸರ ನಿಯೋಜನೆ ಮಾಡಲಾಗಿದೆ. ಕೆಎಸ್‌ಆರ್‌ಪಿ 46, ಸಿಎಆರ್ 30 ತುಕಡಿ ಜೊತೆ ಎರಡು ವಾಟರ್ ಜೆಟ್‌ಗಳನ್ನು ನಿಯೋಜಿಸಿದ್ದಾರೆ.
ಬೆಂಗಳೂರಿನಲ್ಲೂ ಕೆಲವೆಡೆ ಇನ್ನೂ ಬಂದ್ ಬಿಸಿ ತಟ್ಟಿಲ್ಲ. ಬೆಳಗ್ಗೆ ಎಂದಿನಂತೆ ವ್ಯಾಪಾರ, ವಹಿವಾಟು ನಡೆಯುತ್ತಿದೆ. ಹೂ, ಹಣ್ಣು ಖರೀದಿಸುವಲ್ಲಿ ಜನರು ಬ್ಯುಸಿಯಾಗಿದ್ದು ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ಸುಗಳು ಎಂದಿನಂತೆ ನಗರದಲ್ಲಿ ಸಂಚರಿಸುತ್ತಿದೆ.
ಉಡುಪಿ, ದಕ್ಷಿಣ ಕನ್ನಡ, ರಾಮನಗರ, ಚಾಮರಾಜನಗರ, ಚಿಕ್ಕಮಗಳೂರು, ಕೋಲಾರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ಬಾಗಲಕೋಟೆ ಮುಂತಾದ ಜಿಲ್ಲೆಗಳಲ್ಲಿ ಬಂದ್ ಪರಿಣಾಮ ಗೋಚರಿಸುತ್ತಿಲ್ಲ.
ಮೈಸೂರು, ಕೊಡಗು, ತುಮಕೂರು, ಹಾಸನ, ಚಿಕ್ಕಬಳ್ಳಾಪುರ, ಬಳ್ಳಾರಿ, ಬೀದರ್, ವಿಜಯಪುರ, ಚಿಕ್ಕೋಡಿ, ಕಲಬುರಗಿ, ಹಾವೇರಿ, ಹುಬ್ಬಳ್ಳಿ, ಕಾರವಾರ, ಮಂಗಳೂರು, ಶಿವಮೊಗ್ಗ, ಯಾದಗಿರಿ ಸೇರಿ ಕೆಲವು ಜಿಲ್ಲೆಗಳಲ್ಲಿ ಬೆಳಗ್ಗೆ ಆಂಶಿಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕರಾವಳಿಯಲ್ಲಿ ಜನ ಜೀವನ ಅಭಾದಿತ
ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಬೆಳಗ್ಗಿನ ಹೊತ್ತು ಬಂದ್‌ನ ಯಾವ ಲಕ್ಷಣವೂ ಕಾಣಿಸಿಲ್ಲ. ಅಂಗಡಿ, ಹೋಟೆಲ್ ಸೇರಿದಂತೆ ಎಲ್ಲ ವ್ಯಾಪಾರ ಮಳಿಗೆಗಳು ತೆರೆದಿವೆ. ಬಸ್, ಆಟೋರಿಕ್ಷಾ, ಟ್ಯಾಕ್ಸಿ ಸೇರಿದಂತೆ ಸಾರಿಗೆ ವಾಹನಗಳು ಎಂದಿನಂತೆ ಓಡಾಡುತ್ತಿವೆ. ಎಲ್ಲ ಫ್ಯಾಕ್ಟರಿಗಳು ತೆರೆದಿವೆ.