ತಾರೆಯರ ಮೆರುಗಿನೊಂದಿಗೆ ಕೋಲ್ಕತ್ತಾದಲ್ಲಿ ಉದ್ಘಾಟನೆ
ಹೊಸದಿಲ್ಲಿ : ಕ್ರಿಕೆಟ್ ಪ್ರೇಮಿಗಳು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಐಪಿಎಲ್-2025 ಕ್ರಿಕೆಟ್ ಟೂರ್ನಿ ಇಂದಿನಿಂದ ಶುರುವಾಗಲಿದ್ದು, ಅದ್ದೂರಿ ಉದ್ಘಾಟನೆಗೆ ಎಲ್ಲ ತಯಾರಿ ನಡೆದಿದೆ. ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಇಂದು ರಾತ್ರಿ ಸಿನೆಮಾ ತಾರೆಯರು, ಕ್ರಿಕೆಟ್ ದಿಗ್ಗಜರು ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಈ ಋತುವಿನ ಐಪಿಎಲ್ ಶೂಭಾರಂಭವಾಗಲಿದೆ. ಇದು ಐಪಿಎಲ್ 18ನೇ ಆವೃತ್ತಿಯಾಗಿದ್ದು, ಲೀಗ್ ಹಂತದ ಮೊದಲ ಪಂದ್ಯ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (KKR vs RCB) ನಡುವೆ ನಡೆಯಲಿದೆ. ಎರಡೂ ತಂಡಗಳು ಗೆಲುವಿನೊಂದಿಗೆ ಟೂರ್ನಿಯನ್ನು ಆರಂಭಿಸಲು ಸಜ್ಜಾಗಿವೆ. ಹೀಗಾಗಿ ಬಲಿಷ್ಠ ಪಡೆಯನ್ನೇ ಕಟ್ಟಿಕೊಂಡು ತಂಡಗಳು ಕಣಕ್ಕಿಳಿಐಲಿವೆ.
ಆರ್‌ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲಿ ಸುನಿಲ್ ನಾತಾಯಣ್ ಮತ್ತು ಕ್ವಿಂಟನ್ ಡಿಕಾಕ್ ಕೆಕೆಆರ್ ಪರ ಆರಂಭಿಕರಾಗಿ ಆಡಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕೆಕೆಆರ್ ಪರ ಆರಂಭಿಕ ಆಟಗಾರನಾಗಿ ಸುನಿಲ್ ನಾರಾಯಣ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ, ಆದರೆ ಕ್ವಿಂಟನ್ ಡಿಕಾಕ್ ಈ ವರ್ಷವಷ್ಟೇ ಕೆಕೆಆರ್ ಸೇರಿದ್ದಾರೆ. ಈ ಇಬ್ಬರೂ ಎಡಗೈ ಬ್ಯಾಟ್ಸ್‌ಮನ್‌ಗಳು ಈ ವರ್ಷ ಕೆಕೆಆರ್ ಪರ ಆರಂಭಿಕರಾಗಿ ಆಡಲಿದ್ದಾರೆ.
ನಾಯಕ ಅಜಿಂಕ್ಯ ರಹಾನೆ ಮೂರನೇ ಕ್ರಮಾಂಕದಲ್ಲಿ ಆಡಬಹುದು. ವೆಂಕಟೇಶ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದು, ಕೆಳ ಮಧ್ಯಮ ಕ್ರಮಾಂಕದಲ್ಲಿ ಅಂಗ್‌ಕ್ರಿಶ್ ರಘುವಂಶಿ, ರಿಂಕು ಸಿಂಗ್, ಆಂಡ್ರೆ ರಸೆಲ್ ಮತ್ತು ರಮಣದೀಪ್ ಸಿಂಗ್ ಬ್ಯಾಟ್ ಬೀಸಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ಸುನಿಲ್ ನಾರಾಯಣ್ ಮತ್ತು ವರುಣ್ ಚಕ್ರವರ್ತಿ ಆಡುವುದು ಖಚಿತ. ವೇಗದ ಬೌಲರ್ಗಳಾಗಿ ಸ್ಪೆನ್ಸರ್ ಜಾನ್ಸನ್, ವೈಭವ್ ಅರೋರಾ, ಹರ್ಷಿತ್ ರಾಣಾಗೆ ಅವಕಾಶ ಸಿಗುವ ನಿರೀಕ್ಷೆಯಿದೆ.
ಕೆಕೆಆರ್ ತಂಡ : ಸುನಿಲ್ ನಾರಾಯಣ್, ಕ್ವಿಂಟನ್ ಡಿಕಾಕ್ (ವಿಕೆಟ್ ಕೀಪರ್), ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ಅಂಗ್ಕ್ರಿಶ್ ರಘುವಂಶಿ, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಸ್ಪೆನ್ಸರ್ ಜಾನ್ಸನ್, ವೈಭವ್ ಅರೋರಾ, ಹರ್ಷಿತ್ ರಾಣಾ/ವರುಣ್ ಚಕ್ರವರ್ತಿ
ಆರ್ಸಿಬಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಇನ್ನಿಂಗ್ಸ್ ಆರಂಭಿಸಿದರೆ, ನಾಯಕ ರಜತ್ ಪಾಟಿದಾರ್ ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಬ್ಯಾಟ್ ಬೀಸಲಿದ್ದು, ಐದನೇ ಕ್ರಮಾಂಕದಲ್ಲಿ ಬರುವ ಜಿತೇಶ್ ಶರ್ಮಾ ವಿಕೆಟ್ ಕೀಪರ್ ಹಾಗೂ ಫಿನಿಷರ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಆರನೇ ಕ್ರಮಾಂಕಕ್ಕೆ ಪೈಪೋಟಿ ಇದ್ದು, ಜಾಕೋಬ್ ಬೆಥೆಲ್ ಅಥವಾ ಟಿಮ್ ಡೇವಿಡ್ ಅವರಲ್ಲಿ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬುದು ಪ್ರಶ್ನೆಯಾಗಿದೆ.
ಸ್ಪಿನ್ ವಿಭಾಗದಲ್ಲಿ ಸ್ವಲ್ಪ ಬಲಹೀನವಾಗಿ ಕಾಣುತ್ತಿರುವ ಆರ್‌ಸಿಬಿ, ಸ್ಪಿನ್ ಆಲ್‌ರೌಂಡರ್ ಆಗಿ ಕೃಣಾಲ್ ಪಾಂಡ್ಯರನ್ನು ಆಡಿಸುವುದು ಖಚಿತ. ಅವರೊಂದಿಗೆ ಸುಯಾಶ್ ಶರ್ಮಾ ಅಥವಾ ಸ್ವಪ್ನಿಲ್ ಸಿಂಗ್ ಇರಲಿದ್ದಾರೆ. ಬೌಲಿಂಗ್ ವಿಭಾಗವನ್ನು ಭುವನೇಶ್ವರ್ ಕುಮಾರ್, ಆಸ್ಟ್ರೇಲಿಯಾದ ಅನುಭವಿ ಜೋಶ್ ಹ್ಯಾಜಲ್‌ವುಡ್ ಹಾಗೂ ಯಶ್ ದಯಾಳ್ ಮುನ್ನಡೆಸುವುದು ಖಚಿತ. ರಸಿಕ್ ಸಲಾಂ ದಾರ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಾಣಿಸಿಕೊಳ್ಳಬಹುದಾಗಿದೆ. ಇವರ ಜೊತೆಗೆ ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್‌ಗಿಡಿ ಕೂಡ ಇದ್ದಾರೆ.
ಆರ್‌ಸಿಬಿ ತಂಡ : ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಜಾಕೋಬ್ ಬೆಥೆಲ್/ ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ಭುವನೇಶ್ವರ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ಸುಯಾಶ್ ಶರ್ಮಾ/ ಸ್ವಪ್ನಿಲ್ ಸಿಂಗ್. (ರಸೀಖ್ ಸಲಾಮ್ ದಾರ್- ಇಂಪ್ಯಾಕ್ಟ್ ಪ್ಲೇಯರ್)