ಸಂಪಾದಕೀಯ – ಹನಿಟ್ರ್ಯಾಪ್‌ ಹೀನ ಸುಳಿಯೂ ಅವಕಾಶವಾದಿ ರಾಜಕಾರಣವೂ

ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳನ್ನು ಕಾನೂನಿನ ಮುಂದೆ ತಂದು ನಿಲ್ಲಿಸುವ ಕೆಚ್ಚೆದೆ ಇದೆಯೇ?

ದೇಶಾದ್ಯಂತ ಸದ್ದು ಮಾಡುತ್ತಿರುವ ಹನಿಟ್ರ್ಯಾಪ್‌ ಪ್ರಕರಣ ಅಂತಿಮವಾಗಿ ಸುತ್ತಿಕೊಳ್ಳುವುದು ಯಾರ ಕೊರಳಿಗೆ? ಹೀಗೊಂದು ಅನುಮಾನ ಈಗ ರಾಜ್ಯದ ಜನರನ್ನು ಕಾಡುತ್ತಿದೆ. ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿದ್ದ ಹನಿಟ್ರ್ಯಾಪ್‌ ಗುಸುಗುಸು ನಿಜ ಎನ್ನುವುದನ್ನು ವಿಧಾನಮಂಡಲ ಕಲಾಪದಲ್ಲೇ ಒಪ್ಪಿಕೊಳ್ಳಲಾಗಿದೆ. ಹಿರಿಯ ಸಚಿವ ಕೆ.ಎನ್‌.ರಾಜಣ್ಣ ತನ್ನನ್ನೂ ಸೇರಿಸಿ ಸುಮಾರು 48 ಮಂದಿಯ ಹನಿಟ್ರ್ಯಾಪ್‌ ಪ್ರಯತ್ನ ನಡೆದಿದೆ ಹಾಗೂ ಅನೇಕರ ವೀಡಿಯೊಗಳು ದಾಖಲಾಗಿದೆ ಎಂದು ಸದನದಲ್ಲಿ ಹೇಳಿದ್ದಾರೆ. ಹನಿಟ್ರ್ಯಾಪ್‌ ಮಾಡಿದವರು ಯಾರು ಎನ್ನುವುದನ್ನು ಯಾರೂ ಬಹಿರಂಗವಾಗಿ ಹೇಳದಿದ್ದರೂ ಪ್ರತಿಯೊಬ್ಬರ ಮನಸ್ಸಿನಲ್ಲೂ ಇರುವ ವ್ಯಕ್ತಿ ಒಬ್ಬರೇ. ಹೀಗಾಗಿ ಕರ್ನಾಟಕದ ಮುಂದಿನ ರಾಜಕೀಯ ಸ್ಥಿತಿ ಯಾವ ದಿಕ್ಕಿನತ್ತ ಹೊರಳಬಹುದು ಎಂಬ ಕುತೂಹಲ ಮೂಡಿದೆ.
ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ನಡೆಯುತ್ತಿದ್ದ ಶೀತಲ ಸಮರಕ್ಕೆ ಹನಿಟ್ರ್ಯಾಪ್ ಪ್ರಕರಣ ಹೊಸ ತಿರುವು ನೀಡಿರುವದಂತೂ ನಿಜ. ಹನಿಟ್ರ್ಯಾಪ್‌ ಹಿಂದಿರುವುದು ಕಾಂಗ್ರೆಸ್‌ನವರೇ ಎಂದು ಹೇಳಲಾದ ಕೆಲವು ಪ್ರಭಾವಿ ವ್ಯಕ್ತಿಗಳು. ತನ್ನನ್ನು ಹನಿಟ್ರ್ಯಾಪ್‌ ಮಾಡಲು ಬಂದ ಗ್ಯಾಂಗನ್ನು ರಾಜಣ್ಣ ಹಿಡಿದು ಒದ್ದು, ಅವರಿಂದ ಇದರ ಹಿಂದೆ ಇರುವವರು ಯಾರು ಎನ್ನುವುದನ್ನು ಬಾಯಿಬಿಡಿದ್ದಾರೆ. ಒಂದೂವರೆ ತಿಂಗಳ ಹಿಂದೆ ನಡೆದಿತ್ತೆನ್ನಲಾದ ಈ ಘಟನೆಯ ಪಿತೂರಿ ರೂಪಿಸಿದ ಪ್ರಭಾವಿ ಯುವ ನಾಯಕನ ತಪ್ಪೊಪ್ಪಿಗೆ ಹೇಳಿಕೆಯನ್ನೂ ಸಚಿವ ರಾಜಣ್ಣ ಬೆಂಬಲಿಗರು ವೀಡಿಯೊ ಚಿತ್ರೀಕರಣ ಮಾಡಿಟ್ಟುಕೊಂಡಿದ್ದಾರೆ, ಕೆಲವು ಹಿರಿಯ ಪ್ರಭಾವಿ ನಾಯಕರ ಹೆಸರುಗಳನ್ನು ಆತ ಹೇಳಿದ್ದಾನೆ ಎಂಬುದು ಇಷ್ಟರ ತನಕ ಬಹಿರಂಗಗೊಂಡಿರುವ ವಿಚಾರ.

ಆದರೆ ಹನಿಟ್ರ್ಯಾಪ್‌ ನಡೆದು ಒಂದೂವರೆ ತಿಂಗಳ ತನಕ ರಾಜಣ್ಣ ಮೌನವಾಗಿದ್ದು ಏಕೆ? ಗುರುವಾರ ಇದ್ದಕ್ಕಿದ್ದಂತೆ ಅವರು ಎಚ್ಚೆತ್ತುಕೊಂಡು ಸದನದಲ್ಲೇ ಬಹಿರಂಗಪಡಿಸಿದ್ದು ಏಕೆ? ಹನಿಟ್ರ್ಯಾಪ್ ಮಾಡಲು ಬಂದು ವಿಫಲರಾದವರನ್ನು ಪೊಲೀಸರ ವಶಕ್ಕೆ ಏಕೆ ಒಪ್ಪಿಸಿಲ್ಲ? ಹಿನ್ನೆಲೆಯಲ್ಲಿ ನಿಂತ ವ್ಯಕ್ತಿಗಳ ವಿರುದ್ಧ ತಕ್ಷಣವೇ ಪೊಲೀಸರಿಗೆ ಮತ್ತು ಸರಕಾರಕ್ಕೆ ಏಕೆ ದೂರು ನೀಡಲಿಲ್ಲ? ಸಚಿವರಾದ ರಾಜಣ್ಣ ಅವರಿಗೆ ಅಪರಾಧ ಕೃತ್ಯವನ್ನು ಕೂಡಲೇ ಪೊಲೀಸರಿಗೆ ತಿಳಿಸಬೇಕೆಂಬ ಪ್ರಾಥಮಿಕ ಜ್ಞಾನವೂ ಇಲ್ಲವೇ? ವಿಷಯಗಳನ್ನು ಕೆದಕುತ್ತಾ ಹೋದರೆ ಹನಿಟ್ರ್ಯಾಪ್‌ ಜಾಲ ಒಂದೆಡೆಯಾದರೆ ಅದನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಲು ಇನ್ನೊಂದು ಸಂಚು ಹೆಣೆಯಲಾಗಿತ್ತೇ ಎಂಬ ಇನ್ನೊಂದು ಅನುಮಾನವೂ ಮೂಡುತ್ತದೆ.

































 
 

ಒಟ್ಟು ವಿದ್ಯಮಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾತ್ರವೂ ಅನುಮಾನ ಹುಟ್ಟಿಸುವಂತಿದೆ. ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಪ್ರಕಾರ ರಾಜಣ್ಣ ಸೇರಿ 3-4 ಸಚಿವರು ಹನಿಟ್ರ್ಯಾಪ್‌ ಕುರಿತು ಆಗಲೇ ಸಿದ್ದರಾಮಯ್ಯನವರಿಗೆ ತಿಳಿಸಿದ್ದಾರೆ. ಹೈಕಮಾಂಡ್‌ ತನಕವೂ ಸುದ್ದಿ ಮುಟ್ಟಿದೆ. ಆದರೆ ಸಿದ್ದರಾಮಯ್ಯನವರಾಗಲಿ ಕಾಂಗ್ರೆಸ್‌ ಹೈಕಮಾಂಡ್‌ ಆಗಲಿ ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಕೂಡಲೇ ತನಿಖೆಗೆ ಆದೇಶಿಸಬೇಕಿತ್ತು, ಇಲ್ಲದಿದ್ದರೆ ತನ್ನ ಪಕ್ಷದಲ್ಲೆ ಒಂದು ಆಂತರಿಕ ತನಿಖೆಯನ್ನಾದರೂ ಮಾಡಿಸಬೇಕಿತ್ತು. ತನಿಖೆ ಮಾಡುವುದು ಬಿಡಿ ಇಡೀ ಪ್ರಕರಣ ಬಯಲಾದ ಬಳಿಕವೂ ಸಿದ್ದರಾಮಯ್ಯನವರು ಈ ವಿಚಾರದ ಬಗ್ಗೆ ಯಾವುದೋ ಒಂದು ನಿಗೂಢತೆಯನ್ನು ಕಾಯ್ದುಕೊಂಡಿರುವುದು ಅವರು ಸದನದಲ್ಲಿ ಪ್ರತಿಕ್ರಿಯಿಸಿದ ರೀತಿಯಿಂದಲೇ ಗೊತ್ತಾಗುತ್ತದೆ. ಹೀಗಾಗಿ ಸ್ವತಹ ಸಿದ್ದರಾಮಯ್ಯನವರೂ ಹನಿಟ್ರ್ಯಾಪ್‌ ಪ್ರಕರಣದ ಲಾಭ ಪಡೆಯುವ ಹುನ್ನಾರದಲ್ಲಿದ್ದಾರೆಯೇ ಎಂಬ ಅನುಮಾನ ಇದೆ.

ಹನಿಟ್ರ್ಯಾಪ್‌ ವಿಚಾರವನ್ನು ಸದನದಲ್ಲಿ ಮೊದಲು ಪ್ರಸ್ತಾಪಿಸಿದವರು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಅದಕ್ಕೂ ಮುನ್ನ ಅವರ ಕೈಗೆ ಆಡಳಿತ ಪಕ್ಷದ ಕಡೆಯಿಂದ ಚೀಟಿಯೊಂದು ಬಂದಿತ್ತು. ತನ್ನ ಕೈಗೆ ಚೀಟಿ ಸಿಕ್ಕಿದ ಬಳಿಕ ಯತ್ನಾಳ್‌ ಹನಿಟ್ರ್ಯಾಪ್‌ ಬಗ್ಗೆ ದೊಡ್ಡಮಟ್ಟದಲ್ಲಿ ಸದನದಲ್ಲಿ ಧ್ವನಿಎತ್ತಿದ್ದಾರೆ. ತಕ್ಷಣ ಅದಕ್ಕೆ ಶಾಸಕ ಸುನಿಲ್‌ ಕುಮಾರ್‌ ದನಿ ಸೇರಿಸಿದ್ದಾರೆ. ಮಾರ್ಷಲ್‌ ಚೀಟಿ ತಂದು ಕೊಟ್ಟದ್ದನ್ನು ಎಲ್ಲರೂ ನೋಡಿದ್ದಾರೆ. ಬಿಜೆಪಿಯ ಇನ್ನೊಬ್ಬ ಶಾಸಕ ಸುರೇಶ್ ಗೌಡ ಕೂಡ ಸದನದಲ್ಲೇ ಈ ವಿಷಯನ್ನು ಪ್ರಸ್ತಾಪಿಸಿದ್ದಾರೆ. ಆದರೆ ಚೀಟಿಗೆ ಸಂಬಂಧಪಟ್ಟಂತೆ ಸಮರ್ಪಕ ಉತ್ತರ ಆಡಳಿತ ಪಕ್ಷದಿಂದ ಬಂದಿಲ್ಲ. ಇದು ಈ ಪ್ರಕರಣದ ಇನ್ನೊಂದು ಮಗ್ಗುಲು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ಮುಖ್ಯಮಂತ್ರಿ ಪದವಿಗಾಗಿ ತಿಕ್ಕಾಟ ನಡೆಯುತ್ತಲೇ ಇದೆ. ಇತ್ತೀಚಿನ ಕೆಲವು ತಿಂಗಳುಗಳಿಂದ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಕುರಿತಂತೆ ಹೇಳಿಕೆಗಳನ್ನು ಸಿದ್ದರಾಮಯ್ಯ ಬೆಂಬಲಿಗರು ಕೊಡುತ್ತಿದ್ದಾರೆ.
ಸಚಿವರಾದ ರಾಜಣ್ಣ, ಸತೀಶ್ ಜಾರಕಿಹೊಳಿ ಸೇರಿದಂತೆ ಸಿದ್ದರಾಮಯ್ಯ ಪರಮಾಪ್ತ ಬಳಗದಲ್ಲಿರುವ ಸಚಿವರು ಈ ಹೇಳಿಕೆಗಳ ಮುಂಚೂಣಿಯಲ್ಲಿದ್ದು ಅವರನ್ನು ನಿಯಂತ್ರಿಸಲು ಕಾಂಗ್ರೆಸ್ ಹೈಕಮಾಂಡ್ ಕೂಡ ವಿಫಲವಾಗಿದೆ. ಸ್ವತಹ ಸಿದ್ದರಾಮಯ್ಯ ಈ ಹೇಳಿಕೆಗಳ ಬಗ್ಗೆ ನಿಗೂಢ ಮೌನ ವಹಿಸಿದ್ದಾರೆ. ಇತ್ತೀಚೆಗೆ ಶಿವಕುಮಾರ್ ದಿಲ್ಲಿಗೆ ಭೇಟಿ ನೀಡಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಅಧಿಕಾರ ಹಂಚಿಕೆ ಒಪ್ಪಂದ ಜಾರಿಗೊಳಿಸುವಂತೆ ಆಗ್ರಹಿಸಿದರು. ಈ ಭೇಟಿಯನ್ನು ಅವರು ಎಷ್ಟೇ ಗುಟ್ಟಾಗಿ ಇಟ್ಟರೂ ಅದು ಬಹಿರಂಗವಾಯಿತು. ಅಕ್ಟೋಬರ್ ವೇಳೆಗೆ ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಲಿದ್ದು ಆ ವೇಳೆಗೆ ಅಧಿಕಾರ ಹಂಚಿಕೆ ಒಪ್ಪಂದ ಜಾರಿಗೊಳಿಸಲೇಬೇಕೆಂದು ವರಿಷ್ಠರ ಮುಂದೆ ಒತ್ತಡ ಹೇರಿದ್ದಾರೆ. ಈ ಬೆಳವಣಿಗೆಗಳಿಂದಾಗಿ ಕೈ ವರಿಷ್ಠರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಇದೇ ಸಂದರ್ಭದಲ್ಲಿ ಬಹಳ ಲೆಕ್ಕಾಚಾರ ಹಾಕಿ ಹನಿಟ್ರ್ಯಾಪ್‌ ಪ್ರಕರಣವನ್ನು ಬಹಿರಂಗಗೊಳಿಸಲಾಗಿದೆಯೇ ಎಂಬುದು ಈಗ ಕಾಡುತ್ತಿರುವ ಪ್ರಶ್ನೆ.

ಡಿ.ಕೆ.ಶಿವಕುಮಾರ್ ತನ್ನ ರಾಜಕೀಯ ಮಹತ್ವಾಕಾಂಕ್ಷೆಯ ಈಡೇರಿಕೆಗೆ ಅಡ್ಡವಾಗಿದ್ದ ವಿವಿಧ ನಾಯಕರುಗಳನ್ನು ನಿಧಾನವಾಗಿ ತನ್ನ ದಾರಿಯಿಂದ ದೂರ ಸರಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ, ಮಾಜಿ ಪ್ರಧಾನಿ ದೇವೇಗೌಡರ ಪುತ್ರ ರೇವಣ್ಣ ಹಾಗೂ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲೂ ಅವರ ಪಾತ್ರದ ಕುರಿತು ಆರೋಪಗಳು ಕೇಳಿ ಬಂದಿದ್ದವು. ತಮಗಾಗದ ರಾಜಕೀಯ ನಾಯಕರ ವಿರುದ್ಧ ಕೆಲವು ತಂತ್ರಗಳನ್ನು ಬಳಸಿ ಅವರನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನಗಳನ್ನು ಅವರು ಮಾಡುತ್ತಿದ್ದಾರೆ ಎಂಬ ಆರೋಪಗಳು ನಿರಂತರವಾಗಿ ಬರುತ್ತಿದ್ದರೂ ಅವನ್ನು ನಿಖರವಾಗಿ ನಿರಾಕರಿಸದೆ ಹಲವು ಅನುಮಾನಗಳು ಹಾಗೇ ಉಳಿಯುವಂತೆ ಮಾಡಿರುವುದು ಅನೇಕ ಊಹೋಪೋಹಗಳಿಗೆ ಕಾರಣವಾಗಿದೆ.

ರಾಜಣ್ಣ ಪ್ರಕರಣದಲ್ಲೂ ಅವರು ನೀಡಿರುವ ಪ್ರತಿಕ್ರಿಯೆ ಹಲವು ಪ್ರಶ್ನೆಗಳನ್ನು ಮೂಡಿಸಿದೆ. ಪ್ರಜ್ವಲ್‌ ರೇವಣ್ಣ ಲೈಂಗಿಕ ಶೋಷಣೆ ಆರೋಪದಲ್ಲಿ ಜೈಲುಪಾಲಾಗಿ ಹಲವು ತಿಂಗಳಾಗಿದ್ದು, ಈ ಪ್ರಕರಣವೂ ಈಗ ಹನಿಟ್ರ್ಯಾಪ್‌ ಜೊತೆಗೆ ತಳುಕು ಹಾಕಿಕೊಂಡಿದೆ. ಇದಕ್ಕೂ ಮೊದಲು ರಮೇಶ್‌ ಜಾರಕಿಹೊಳಿ ರಾಜಕೀಯ ಬದುಕು ಮುಗಿಸಿದ ಸಿಡಿ ಪ್ರಕರಣದ ಹಿಂದೆಯೂ ಹನಿಟ್ರ್ಯಾಪ್‌ ಜಾಲದ ಅನುಮಾನ ಇದೆ. ಆ ದಿನಗಳಲ್ಲಿ ಜಾರಕಿಹೊಳಿ, ಡಿಕೆಶಿ ವಿರುದ್ಧವೇ ಬಹಿರಂಗವಾಗಿ ಆರೋಪಗಳನ್ನು ಮಾಡಿರುವುದನ್ನು ನೆನಪಿಸಿಕೊಳ್ಳಬಹುದು. ಈಗ ರಾಜ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ನಡೆದ ಸಿಡಿ, ಪೆನ್‌ಡ್ರೈವ್‌ ಪ್ರಕರಣಗಳೆಲ್ಲ ಮುನ್ನೆಲೆಗೆ ಬಂದಿದ್ದು, ಎಲ್ಲರೂ ಮರುತನಿಖೆಗೆ ಒತ್ತಾಯಿಸುತ್ತಿದ್ದಾರೆ. ಇದುವರೆಗೆ ನಡೆದಿರುವ ಇಂತಹ ಎಲ್ಲ ಪ್ರಕರಣಗಳ ಹಿಂದಿನ ಕಾಣದ ಕೈಗಳು ಬಯಲಾಗಬೇಕು ಅದಕ್ಕಾಗಿ ಆ ಎಲ್ಲದರ ಬಗ್ಗೆಯೂ ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು ಎಂಬ ಆಗ್ರಹದಲ್ಲಿ ನ್ಯಾಯವಿರುವುದೂ ನಿಜ.

ರಾಜಣ್ಣ ಅವರೇ ಹೇಳಿರುವಂತೆ ಕರ್ನಾಟಕ ಈಗ ದೇಶದ ಸಿಡಿ ಫ್ಯಾಕ್ಟರಿ ಎಂಬ ಕುಖ್ಯಾತಿಯನ್ನು ಗಳಿಸಿರುವುದು ನಿಜಕ್ಕೂ ರಾಜ್ಯಕ್ಕೆ ಅಂಟಿರುವ ಕಳಂಕ. ರಾಜಕೀಯ ಪ್ರವರ್ಧಮಾನಕ್ಕಾಗಿ ತನ್ನ ಜೊತೆಗೆ ಇರುವವರನ್ನು ಮೋಹನಾಂಗಿಯರ ಜಾಲಕ್ಕೆ ಕೆಡವಿ ಹಾಕಿ ಅದನ್ನು ಶೂಟಿಂಗ್‌ ಮಾಡಿ ಬೆದರಿಸಿ, ಬಹಿರಂಗ ಮಾಡಿ ಉನ್ನತ ಸ್ಥಾನ ಪಡೆಯುವ ಮಟ್ಟಿಗೆ ನಮ್ಮ ನಾಯಕರು ಹೀನ ಸುಳಿಯವರು ಎಂಬ ವಿಚಾರವೇ ರೇಜಿಗೆ ಹುಟ್ಟಿಸುತ್ತದೆ. ಇಂಥ ನಾಯಕರಿಂದ ಆಳಿಸಿಕೊಳ್ಳಬೇಕಾದ ದುರಾದೃಷ್ಟ ನಮ್ಮ ನಾಡಿಗೆ ಬಂದಿರುವುದು ನಿಜಕ್ಕೂ ದುರಂತ. ಇನ್ನಾದರೂ ಈ ನೀಚ ರಾಜಕಾರಣಕ್ಕೊಂದು ಅಂತ್ಯ ಹಾಡಬೇಕಾಗಿದೆ. ಇದು ಸಾಧ್ಯವಾಗಬೇಕಾದರೆ ಈಗ ಬಯಲಿಗೆ ಬಂದಿರುವ ಹನಿಟ್ರ್ಯಾಪ್‌ ಪ್ರಕರಣದ ನಿಷ್ಪಕ್ಷಪಾತ ತನಿಖೆಯಾಗಿ ಆರೋಪಿಗಳು ಯಾರೇ ಆಗಿದ್ದರೂ ಕಾನೂನಿನ ಮುಂದೆ ನಿಲ್ಲಿಸಬೇಕು. ಆ ಕೆಚ್ಚೆದೆ ಸರಕಾರಕ್ಕೆ ಇದೆಯೇ?

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top