ಬಿ.ಸಿ.ರೋಡ್ : ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟ ಘಟನೆ ಪರಂಗಿಪೇಟೆ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಅಪಘಾತವೆಸಗಿದ ಕಾರು ಚಾಲಕ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
10 ನೇ ಮೈಲುಕಲ್ಲು ನಿವಾಸಿ ವಸಂತಿ ಶೆಟ್ಟಿ ಅಪಘಾತದಲ್ಲಿ ಮೃತಪಟ್ಟವರು. ಫರಂಗಿಪೇಟೆ ಸಮೀಪದ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣಾ ವ್ಯಾಪ್ತಿಯ 10ನೇ ಮೈಲುಕಲ್ಲು ಎಂಬಲ್ಲಿ ಪಾದಚಾರಿ ಮಹಿಳೆಯೋರ್ವರಿಗೆ ಮಂಗಳೂರು ಕಡೆಯಿಂದ ಬಿಸಿರೋಡು ಕಡೆಗೆ ಬರುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ದೂರಕ್ಕೆ ಎಸೆಯಲ್ಪಟ್ಟ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆಯೇ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.