ಹಿರಿಯ ನಿರ್ದೆಶಕ ಎ.ಟಿ.ರಘು ನಿಧನ

ಅಂಬರೀಷ್‌, ರಜನಿಕಾಂತ್‌ ಚಿತ್ರಗಳನ್ನು ನಿರ್ದೆಶಿಸಿದ್ದ ನಿರ್ದೇಶಕ

ಬೆಂಗಳೂರು : ಕನ್ನಡದ ಖ್ಯಾತ ನಿರ್ದೇಶಕ ಎ.ಟಿ.ರಘು (76) ಗುರುವಾರ ರಾತ್ರಿ ನೀಧನರಾಗಿದ್ದಾರೆ. ಮಂಡ್ಯದ ಗಂಡು ಸೇರಿದಂತೆ ಒಟ್ಟು 55 ಸಿನಿಮಾಗಳನ್ನು ಎ.ಟಿ ರಘು ಅವರು ನಿರ್ದೇಶನ ಮಾಡಿದ್ದರು. ಹಿಂದಿ ಮತ್ತು ಮಳಯಾಲಂ ಚಿತ್ರಗಳಲ್ಲೂ ಕೆಲಸ ಮಾಡಿದ್ದರು. ಅವರ ನಿಧನ ವಾರ್ತೆ ತಿಳಿದು ಚಿತ್ರರಂಗದ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.
ಅಂಬರೀಷ್‌ ನಾಯಕನಾಗಿ ನಟಿಸಿದ 25ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಹಿರಿಮೆ ಎ.ಟಿ.ರಘು ಅವರಿಗಿದೆ. ತೀವ್ರ ಅನಾರೋಗ್ಯದಿಂದ ರಘು ಬಳಲುತ್ತಾ ಇದ್ದರು. ನಿರಂತರವಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಬೆಂಗಳೂರಿನ ಆರ್​ಟಿ ನಗರದ ಮಠದಹಳ್ಳಿಯಲ್ಲಿ ಅವರ ಪಾರ್ಥಿವ ಶರೀರ ಇಡಲಾಗಿದ್ದು, ಇಂದು ಮಧ್ಯಾಹ್ನ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಅವರು ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ.
ಎ.ಟಿ ರಘು ಹುಟ್ಟಿದ್ದು ಕೊಡಗಿನಲ್ಲಿ. ಕೊಡವ ಸಮುದಾಯಕ್ಕೆ ಸೇರಿದ ಅವರು ಚಿತ್ರರಂಗದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ಚಿತ್ರರಂಗದಲ್ಲಿ ನಿರ್ದೇಶಕನಾಗಿ, ನಿರ್ಮಾಪಕನಾಗಿ, ಚಿತ್ರಕಥೆ ಬರಹಗಾರನಾಗಿ ಗುರುತಿಸಿಕೊಂಡರು. ಅವರು ಕನ್ನಡ ಮಾತ್ರವಲ್ಲದೆ ಹಿಂದಿಯಲ್ಲೂ ಸಿನಿಮಾ ನಿರ್ದೇಶನ ಮಾಡಿದ್ದಾರೆ.
1980ರಲ್ಲಿ ಬಿಡುಗಡೆಯಾದ ‘ನ್ಯಾಯ ನೀತಿ ಧರ್ಮ’ ಅವರ ನಿರ್ದೇಶನದ ಮೊದಲ ಸಿನಿಮಾ. ಅಂಬರೀಷ್, ಆರತಿ, ದ್ವಾರಕೀಶ್ ಈ ಚಿತ್ರದಲ್ಲಿ ನಟಿಸಿದರು. ಈ ಸಿನಿಮಾ ಮೂಲಕ ಅಂಬರೀಷ್ ಜೊತೆ ರಘು ಅವರಿಗೆ ಒಳ್ಳೆಯ ಒಡನಾಟ ಬೆಳೆಯಿತು. ಅಂಬರೀಷ್ ನಟನೆಯ ‘ಆಶಾ’, ‘ಅವಳ ನೆರಳು’, ‘ಮಂಡ್ಯದ ಗಂಡು’, ‘ಮಿಡಿದ ಹೃದಯಗಳು’ ಸೇರಿ 27 ಸಿನಿಮಾಗಳನ್ನು ರಘು ನಿರ್ದೇಶನ ಮಾಡಿದ್ದರು ಅನ್ನೋದು ವಿಶೇಷ.
ರಘು ಅವರು ಹಿಂದಿ, ಮಲಯಾಳಂ ಚಿತ್ರರಂಗದಲ್ಲೂ ಕೆಲಸ ಮಾಡಿದ್ದಾರೆ. ‘ಆಶ’ ಚಿತ್ರವನ್ನು ಅವರು ಹಿಂದಿಗೆ ‘ಮೇರಿ ಅದಾಲತ್’ ಹೆಸರಿನಲ್ಲಿ ರಿಮೇಕ್ ಮಾಡಿದರು. ಇದರಲ್ಲಿ ರಜನಿಕಾಂತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ 1984ರಲ್ಲಿ ರಿಲೀಸ್ ಆಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top