ಲ್ಯಾಂಡ್ ಆದ ಬಳಿಕವಷ್ಟೆ ಸಿಬ್ಬಂದಿಗೆ ತಿಳಿಯಿತು
ಲಖನೌ: ದೆಹಲಿಯಿಂದ ಲಕ್ನೋಗೆ ಬಂದಿಳಿದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಇಂದು ಸಂಭವಿಸಿದೆ. ಆದರೆ ಪ್ರಯಾಣಿಕ ಮೃತಪಟ್ಟ ವಿಚಾರ ವಿಮಾನದ ಸಿಬ್ಬಂದಿಗೆ ತಿಳಿದದ್ದು ವಿಮಾನ ಲ್ಯಾಂಡ್ ಆದ ಬಳಿಕ. ಮೃತ ವ್ಯಕ್ತಿಯನ್ನು ಆಸಿಫುಲ್ಲಾ ಅನ್ಸಾರಿ ಎಂದು ಗುರುತಿಸಲಾಗಿದೆ. ಬೆಳಗ್ಗೆ 8.10ಕ್ಕೆ ವಿಮಾನ ಲಖನೌ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿತ್ತು, ಸಿಬ್ಬಂದಿ ಪ್ರಯಾಣಿಕನನ್ನು ಎಬ್ಬಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ವಿಮಾನದಲ್ಲಿದ್ದ ವೈದ್ಯರು ಪ್ರಯಾಣಿಕನನ್ನು ಪರೀಕ್ಷಿಸಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಪ್ರಯಾಣಿಕ ತನ್ನ ಸೀಟ್ ಬೆಲ್ಟ್ ಅನ್ನು ಬಿಚ್ಚಿರಲಿಲ್ಲ, ವಿಮಾನ ಲಖನೌಗೆ ಬರುವ ಮುನ್ನವೇ ಆತ ಸಾವನ್ನಪ್ಪಿರಬೇಕೆಂದು ವೈದ್ಯರು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ. ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ಆರಂಭಿಸಿದ್ದಾರೆ.