ಸುಳ್ಯ: ಮದುವೆ ನಿಗದಿಯಾಗಿದ್ದ ಯುವಕನೋರ್ವ ನಾಪತ್ತೆಯಾದ ಕುರಿತು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಳಿಲ ಗ್ರಾಮದ ದೇರಂಪಾಲು ಆರ್.ಸಿ.ಮನೆ ಶೀನಪ್ಪ ರೈಯವರ ಪುತ್ರ ಹರೀಶ್ ರೈ ಕಾಣೆಯಾದವರು.
ಹರೀಶ್ ಸುಮಾರು 13 ವರ್ಷಗಳಿಂದ ಪುತ್ತೂರಿನ ಖಾಸಗಿ ಫೈನಾನ್ಸ್ ನಲ್ಲಿ ಸೀನಿಯರ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ ದೂರದ ಸಂಬಂಧಿ ಯುವತಿ ಜೊತೆ ವಿವಾಹ ನಿಶ್ಚಯವಾಗಿತ್ತು. ಹರೀಶ್ ಮಾ.20 ರಂದು ಬೆಳಿಗ್ಗೆ 7:30 ಗಂಟೆಗೆ ಯುವತಿಯ ಮನೆಗೆ ಹೋಗಿ ಬಳಿಕ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಬೈಕ್‌ನಲ್ಲಿ ತೆರಳಿ ವಾಪಸ್ ಸಂಜೆ 5:00 ಗಂಟೆಗೆ ಮನೆಗೆ ಬರಬೇಕಾದವರು ಸಂಜೆ 6:00 ಗಂಟೆಯಾದರೂ ಬಾರದೇ ಇದ್ದಾಗ ಯುವತಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ್ದಾರೆ.
ಆಗ ಯುವತಿ, ಹರೀಶ್ ಮನೆಗೆ ಬೆಳಿಗ್ಗೆ 8:00 ಗಂಟೆಗೆ ತನ್ನ ಮನೆಗೆ ಬಂದು ನನ್ನನ್ನು ತನ್ನ ಬೈಕ್ ನಲ್ಲಿ ಪುತ್ತೂರಿಗೆ ಕರೆದುಕೊಂಡು ಹೋಗಿ ನನಗೆ ವಿಟ್ಲಕ್ಕೆ ಹೋಗಲು ಇದ್ದುದ್ದರಿಂದ ಪುತ್ತೂರು ಬಸ್ ನಿಲ್ದಾಣದಲ್ಲಿ ಇಳಿಸಿ ತಾನು ಚಿನ್ನಾಭರಣ ಖರೀದಿ ಬಗ್ಗೆ ಮಂಗಳೂರಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದಾರೆ. ಬಳಿಕ ನಾನು 12:00 ಗಂಟೆ ಬಳಿಕ ಹರೀಶನಿಗೆ ಕಾಲ್ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ತಿಳಿಸಿದ್ದಾರೆ.
ಮಂಗಳೂರಿನಲ್ಲಿರುವ ಸಂಬಂಧಿಕರಿಗೆ ಹಾಗೂ ಯುವಕನ ಸಹೋದ್ಯೋಗಿಗಳಿಗೆ ಫೋನ್ ಮಾಡಿ ವಿಚಾರಿಸಿದಾಗ ಯಾವುದೇ ಮಾಹಿತಿ ದೊರಕಿರುವುದಿಲ್ಲ. ಆದರಿಂದ ಕಾಣೆಯಾಗಿರುವ ಹರೀಶ್ ರೈ ಯವರನ್ನು ಪತ್ತೆ ಹಚ್ಚಿ ಕೊಡಬೇಕು ಎಂದು ಅಣ್ಣ ವೆಂಕಪ್ಪ ರೈ ಯವರು ಪೋಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.