ಸದ್ದಿಲ್ಲದೆ ವೇತನ ಏರಿಸಿಕೊಂಡ ಸರಕಾರ
ಬೆಂಗಳೂರು : ಜನರು ಬೆಲೆ ಏರಿಕೆಯಿಂದ ನಿತ್ಯ ಖರ್ಚುವೆಚ್ಚಗಳನ್ನು ಸರಿದೂಗಿಸಲು ಒದ್ದಾಡುತ್ತಿರುವಾಗಲೇ ಸರಕಾರ ಮಾತ್ರ ಮುಖ್ಯಮಂತ್ರಿಯೂ ಸೇರಿದಂತೆ ಎಲ್ಲ ಸಚಿವರ ಮತ್ತು ಶಾಸಕರ ವೇತವನ್ನು ಸದ್ದಿಲ್ಲದೆ ಹೆಚ್ಚಿಸಿಕೊಂಡಿದೆ. ಸಚಿವರು ಮತ್ತು ಶಾಸಕರ ವೇತನವನ್ನು ಶೇ.100ರಷ್ಟು ಹೆಚ್ಚಿಸುವ ಪ್ರಸ್ತಾವಕ್ಕೆ ರಾಜ್ಯಪಾಲರಿಂದ ಅನುತಿಯೂ ದೊರೆತಿದೆ. ಕಲಾಪ ವ್ಯವಹಾರಗಳ ಸಲಹಾ ಸಮಿತಿಯ ನಿರ್ಣಯದಂತೆ ‘ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ 2025’ ಮತ್ತು ‘ಕರ್ನಾಟಕ ಶಾಸಕಾಂಗ ಸದಸ್ಯರ ವೇತನ, ಪಿಂಚಣಿ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ 2025’ಕ್ಕೆ ರಾಜ್ಯಪಾಲರ ಅನುಮತಿ ಪಡೆಯುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ತಿದ್ದುಪಡಿ ಮಸೂದೆಯನ್ನು ವಿಧಾನಸಭೆ ಹಾಗೂ ಪರಿಷತ್ನಲ್ಲಿ ಸರ್ಕಾರ ಮಂಡಿಸಲಿದ್ದು ಅನುಮೋದನೆ ಪಡೆಯಲಿದೆ. ಪರಿಣಾಮವಾಗಿ ಮುಖ್ಯಮಂತ್ರಿಗಳು, ಸಚಿವರು ಹಾಗೂ ಶಾಸಕರ ವೇತನ ಮತ್ತು ಭತ್ಯೆಗಳಲ್ಲಿ ಹೆಚ್ಚಳವಾಗಲಿದೆ.ಈ ಮಸೂದೆ ಯಾವುದೇ ವಿರೋಧವಿಲ್ಲದೆ ಪಾಸಾಗುವುದು ಖಂಡಿತ ಎನ್ನಲಾಗಿದೆ.
ಮುಖ್ಯಮಂತ್ರಿ ವೇತನ ತಿಂಗಳಿಗೆ 1.5 ಲಕ್ಷ ರೂ.ಗೆ ಏರಿಕೆಯಾಗಲಿದ್ದು, ಇದು ಶೇ.100 ರ ಹೆಚ್ಚಳವಾಗಿರಲಿದೆ. ಸಚಿವರ ವೇತನ 1.25 ಲಕ್ಷ ರೂ.ಗೆ ಏರಿಕೆಯಾಗಲಿದೆ. ಶಾಸಕರು ಹಾಗೂ ವಿಪಕ್ಷ ನಾಯಕರ ವೇತನ 80 ಸಾವಿರ ರೂ.ಗೆ ಏರಿಕೆಯಾಗಲಿದೆ. ಸಚಿವರ ಮನೆ ಬಾಡಿಗೆ ಭತ್ಯೆ 2.50 ಲಕ್ಷ ರೂ.ಗೆ ಹೆಚ್ಚಾಗಲಿದೆ.
ಶಾಸಕರ ವೇತನ 40 ಸಾವಿರ ರೂ.ನಿಂದ 80 ಸಾವಿರ ರೂ.ಗೆ ಹೆಚ್ಚಳವಾಗಲಿದೆ. ಅದರ ಜತೆಗೆ ವಿಧಾನಸಭಾಧ್ಯಕ್ಷ ಮತ್ತು ವಿಧಾನಪರಿಷತ್ ಸಭಾಪತಿ ವೇತನ 75 ಸಾವಿರ ರೂ.ನಿಂದ 1.25 ಲಕ್ಷ ರೂ, ಸಿಎಂ ವೇತನ 75 ಸಾವಿರ ರೂ.ನಿಂದ 1.50 ಲಕ್ಷ ರೂ., ಸಚಿವರ ವೇತನ 60 ಸಾವಿರ ರೂ.ನಿಂದ 1.25 ಲಕ್ಷ ರೂ. ವರೆಗೆ ಹೆಚ್ಚಳವಾಗಲಿದೆ.
ಸಚಿವರು, ಶಾಸಕರ ವೇತನ ಹೆಚ್ಚಳದಿಂದ ವಾರ್ಷಿಕ ಸರ್ಕಾರಕ್ಕೆ 62 ಕೋಟಿ ರೂ. ಹೆಚ್ಚುವರಿ ಹೊರೆ ಅಂದಾಜಿಸಲಾಗಿದೆ. ಬಿಜೆಪಿ ಸರ್ಕಾರ 2022ರಲ್ಲಿ ಶಾಸಕರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಮಾಡಿತ್ತು. ಆಗ ಮಂಡಿಸಲಾಗಿದ್ದ ತಿದ್ದುಪಡಿ ವಿಧೇಯಕದಲ್ಲಿ ಬೆಲೆ ಸೂಚ್ಯಂಕ ಆಧಾರದಲ್ಲಿ 2023ರ ಏಪ್ರಿಲ್ 1ರಿಂದ 5 ವರ್ಷಕ್ಕೊಮ್ಮೆ ವೇತನ ವೇತನ ಹೆಚ್ಚಿಸುವ ಬಗ್ಗೆ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ, ಇದೀಗ 2 ವರ್ಷ ಪೂರ್ಣವಾಗುವ ಮೊದಲೇ ಶಾಸಕರ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.
ಸಚಿವರು, ಶಾಸಕರ ವೇತನ ಹೆಚ್ಚಳವನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ ಹಾಗೂ ಇತರ ಸಚಿವರು ಸಮರ್ಥಿಸಿಕೊಂಡಿದ್ದಾರೆ. ಇತರ ಜನರೊಂದಿಗೆ ಸಚಿವರು, ಶಾಸಕರ ಖರ್ಚು ಕೂಡ ಹೆಚ್ಚಾಗುತ್ತಿದೆ. ಸಾಮಾನ್ಯ ಮನುಷ್ಯ ಕೂಡ ಬೆಲೆ ಏರಿಕೆಯಿಂದ ಬಳಲುತ್ತಿದ್ದಾನೆ. ಶಾಸಕರೂ ಇದಕ್ಕೆ ಹೊರತಲ್ಲ. ಆದ್ದರಿಂದ, ಶಾಸಕರು ಮತ್ತು ಇತರರಿಂದ ಶಿಫಾರಸುಗಳು ಬಂದಿವೆ, ಮತ್ತು ಅದಕ್ಕಾಗಿಯೇ ಮುಖ್ಯಮಂತ್ರಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಪರಮೇಶ್ವರ್ ಹೇಳಿದ್ದಾರೆ.