ನಾಳೆಯಿಂದ ಶುರುವಾಗಲಿದೆ ಎರಡು ತಿಂಗಳ ಕ್ರಿಕೆಟ್ ಸಂಭ್ರಮ
ಮುಂಬಯಿ: ಚಾಂಪಿಯನ್ ಟ್ರೋಫಿ ಮುಗಿದ ಬೆನ್ನಿಗೆ ಇಂಡಿಯನ್ ಪ್ರೀಮಿಯರ್ ಲೀಗ್-2025 (ಐಪಿಎಲ್) ಕ್ರಿಕೆಟ್ ಟೂರ್ನಿಗೆ ಕ್ಷಣಗಣನೆ ಪ್ರಾರಂಭವಾಗಿದೆ. 10 ತಂಡಗಳು ಎರಡು ತಿಂಗಳ ಕ್ರಿಕೆಟ್ ಹಬ್ಬಕ್ಕೆ ತಯಾರಾಗಿರುವಂತೆಯೇ ಬಿಸಿಸಿಐ ಈ ಸಲ ಐಪಿಎಲ್ ನಿಯಮಾವಳಿಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.
ಮಾರ್ಚ್ 22ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಚುಟುಕು ಕ್ರಿಕೆಟ್ ಟೂರ್ನಿ ಶುರುವಾಗುತ್ತದೆ. ಐಪಿಎಲ್ 18ನೇ ಋತುವಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐ ಮುಂದಾಗಿದ್ದು, ಕೊರೊನಾ ಸಂದರ್ಭದಲ್ಲಿ ನಿಷೇಧಿಸಲಾಗಿದ್ದ ಹಳೆ ನಿಯಮ ಮತ್ತೆ ಜಾರಿಗೆ ಬರಲಿದೆ.
ವಾಡಿಕೆಯಂತೆ ಐಪಿಎಲ್ ಆರಂಭಕ್ಕೂ ಮುನ್ನ ಮುಂಬೈನ ಕೇಂದ್ರ ಕಚೆರಿಯಲ್ಲಿ ಎಲ್ಲ 10 ತಂಡಗಳ ನಾಯಕರ ಸಭೆ ನಡೆಸಿದ ಬಿಸಿಸಿಐ ಇದುವರೆಗೆ ಜಾರಿಯಲ್ಲಿದ್ದ ಕೆಲವು ಐಪಿಎಲ್ ನಿಯಮಗಳನ್ನು ರದ್ದು ಮಾಡುವುದರ ಜೊತೆಗೆ ಹೊಸ ನಿಯಮಗಳನ್ನು ಜಾರಿಗೆ ತಂದಿರುವುದಾಗಿ ಮೂಲಗಳು ತಿಳಿಸಿದೆ. ಆದರೆ ಈ ಎಲ್ಲ ನಿಯಮಗಳ ಬಗ್ಗೆ ಬಿಸಿಸಿಐ ಕಡೆಯಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಚೆಂಡಿಗೆ ಹೊಳಪು ಮಾಡಲು ಎಂಜಲು ಉಜ್ಜುವ ಪದ್ಧತಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಿಷೇಧಿಸಿತ್ತು. ಐಸಿಸಿ 2022ರಲ್ಲಿ ಈ ನಿಷೇಧವನ್ನು ಶಾಶ್ವತಗೊಳಿಸಿದೆ. ಆದರೆ ಇದೀಗ ಈ ನಿಯಮವನ್ನು ಬಿಸಿಸಿಐ ತೆರವುಗೊಳಿಸಿದೆ. ಕ್ರಿಕೆಟ್ ಚೆಂಡನ್ನು ಹೊಳಪು ಮಾಡಲು ಲಾಲಾರಸದ ಬಳಕೆಯ ಮೇಲಿನ ನಿಷೇಧವನ್ನು ರದ್ದುಗೊಳಿಸಿರುವುದು ಅತ್ಯಂತ ಗಮನಾರ್ಹ ಬದಲಾವಣೆಗಳಲ್ಲಿ ಒಂದಾಗಿದೆ.
ಬಹುಪಾಲು ನಾಯಕರು ಈ ಕ್ರಮವನ್ನು ಬೆಂಬಲಿಸಿದ್ದಾರೆ ಎಂದು ಹೇಳಲಾಗಿದೆ. ಈ ನಿರ್ಧಾರವು ಆಟದಲ್ಲಿ ಸ್ವಿಂಗ್ ಮತ್ತು ರಿವರ್ಸ್ ಸ್ವಿಂಗ್‌ನ ಚಲನಶೀಲತೆಯನ್ನು ಮತ್ತೆ ಪರಿಚಯಿಸುವ ನಿರೀಕ್ಷೆಯಿದೆ, ಇದನ್ನು ಹಿರಿಯ ವೇಗಿ ಮೊಹಮ್ಮದ್ ಶಮಿ ಮತ್ತು ಟಿಮ್ ಸೌಥಿ ಸೇರಿದಂತೆ ಅನೇಕ ಆಟಗಾರರು ಬೆಂಬಲಿಸಿದ್ದಾರೆ.