ಐದು ವರ್ಷಗಳ ಬಳಿಕ ಸಾವಿನ ಮರುತನಿಖೆ ಆಗ್ರಹಿಸಿ ಹೈಕೋರ್ಟ್ ಮೆಟ್ಟಿಲೇರಿದ ತಂದೆ
ಮುಂಬಯಿ: ಮುಂಬಯಿಯಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಸೇರಿದಂತೆ ಸಿನೆಮಾ ತಾರೆಯರು ಮತ್ತು ಸೆಲೆಬ್ರಿಟಿಗಳಿಗೆ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಉಡುಪಿ ಮೂಲದ ದಿಶಾ ಸಾಲ್ಯಾನ್ ಎಂಬ ಯುವತಿಯ ಸಾವಿನ ಕೇಸ್ ಮರುಜೀವ ಪಡೆದುಕೊಂಡಿದೆ. ದಿಶಾ ಸಾಲ್ಯಾನ್ ಸಾವಿಗೀಡಾಗಿ ಐದು ವರ್ಷಗಳ ಬಳಿಕ ಅವರ ತಂದೆ ಸತೀಶ್ ಸಾಲ್ಯಾನ್ ಮಗಳನ್ನು ಗ್ಯಾಂಗ್‌ರೇಪ್ ಮಾಡಿ ಸಾಯಿಸಲಾಗಿದೆ ಮತ್ತು ಇದರ ಹಿಂದೆ ಮಾಜಿ ಮುಖ್ಯಮಂತ್ರಿ ಉದ್ಧವ ಠಾಕ್ರೆಯವರ ಪುತ್ರ ಮಾಜಿ ಸಚಿವ ಆದಿತ್ಯ ಠಾಕ್ರೆ ಕೈವಾಡ ಇದೆ ಎಂದು ಆರೋಪಿಸಿ ಹೈಕೋರ್ಟಿಗೆ ದೂರು ನೀಡಿದ್ದಾರೆ.
ಅಂದು ರಾಜಕೀಯ ಒತ್ತಡದ ಕಾರಣ ಪ್ರಕರಣದ ತನಿಖೆ ಸಮರ್ಪಕವಾಗಿ ನಡೆದಿಲ್ಲ ಮತ್ತು ನಾನು ಕೂಡ ರಾಜಕೀಯ ಒತ್ತಡಕ್ಕೊಳಗಾಗಿ ಪ್ರಕರಣದಲ್ಲಿ ಯಾರ ಮೇಲೂ ಅನುಮಾನವಿಲ್ಲ ಎಂಬ ಹೇಳಿಕೆ ನೀಡಿದ್ದೆ. ಆದರೆ ಮಗಳ ಸಾವಿನಲ್ಲಿ ಆದಿತ್ಯ ಠಾಕ್ರೆಯ ನೇರ ಕೈವಾಡವಿದೆ. ಈ ಕುರಿತು ಮರುತನಿಖೆ ಆಗಬೇಕೆಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಮಾಜಿ ಮೇಯರ್ ಕಿಶೋರಿ ಪೆಡ್ನೇಕರ್ ಮತ್ತು ಇತರರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಏನಿದು ಪ್ರಕರಣ?
ಉಡುಪಿಯಲ್ಲಿ ಹುಟ್ಟಿ ಮುಂಬಯಿಯಲ್ಲಿ ಬೆಳೆದ ದಿಶಾ ಸಾಲಿಯಾನ್ ಸೆಲೆಬ್ರಿಟಿಗಳ ಮ್ಯಾನೇಜರ್ ಆಗಿದ್ದರು. 2020ರ ಜೂನ್ 8ರಂದು ಮುಂಬಯಿಯ ಮಲಾಡ್‌ನಲ್ಲಿ ಬಹುಮಹಡಿ ಕಟ್ಟಡದ ಮೇಲಿನಿಂದ ಬಿದ್ದು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಅವರು ಯುವನಟ ಸುಶಾಂತ್ ಸಿಂಗ್ ರಜಪೂತ್‌ಗೂ ಮ್ಯಾನೇಜರ್ ಆಗಿದ್ದು. ದಿಶಾ ಮೃತಪಟ್ಟ ಆರು ದಿನಗಳ ಬಳಿಕ ಸುಶಾಂತ್ ಸಿಂಗ್ ಕೂಡ ನಿಗೂಢವಾಗಿ ಸಾವಿಗೀಡಾಗಿದ್ದರು. ಈ ಎರಡು ಸಾವುಗಳು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಇಂದಿಗೂ ಉತ್ತರ ಸಿಗದ ಪ್ರಶ್ನೆಯಾಗಿ ಉಳಿದಿದೆ. ಸಿಬಿಐ ತನಿಖೆಯಿಂದಲೂ ಈ ಪ್ರಕರಣಗಳನ್ನು ಭೇದಿಸಲು ಸಧ್ಯವಾಗಿಲ್ಲ.

ಕೊರೊನಾ ಸಮಯದಲ್ಲಿ ಭಾವಿ ಪತಿ ರೋಹನ್ ರೈ ಜೊತೆಗೆ ದಿಶಾ ಇದ್ದರು. 2020ರ ಜೂನ್ 8ರಂದು ದಿಶಾ ಭಾವಿಪತಿ ಹಾಗೂ ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದರು. ಈ ಪಾರ್ಟಿಗೆ ಬಾಲಿವುಡ್‌ನ ಹಲವು ನಟರ ಜೊತೆಗೆ ಆದಿತ್ಯ ಠಾಕ್ರೆ ಹೋಗಿದ್ದರು. ಅಂದೇ ರಾತ್ರಿ ಮಲಾಡ್‌ನ ಅಪಾರ್ಟ್‌ಮೆಂಟ್‌ನ 14ನೇ ಅಂತಸ್ತಿನಿಂದ ದಿಶಾ ಸಾಲಿಯಾನ್ ಬಿದ್ದು ಸಾವಿಗೀಡಾಗಿದ್ದಾರೆ. ಇದೇ ಅಪಾರ್ಟ್‌ಮೆಂಟ್‌ನಲ್ಲಿ ಅವರ ಮನೆಯಿತ್ತು.
ಸುಶಾಂತ್ ಸಿಂಗ್ ರಜಪೂತ್ ತಂದೆ ಕೆ.ಕೆ ಸಿಂಗ್ ದಿಶಾ ಸಾಲಿಯಾನ್ ಸಾವಿನ ಬಗ್ಗೆ ಮರುತನಿಖೆ ಮಾಡಬೇಕೆಂಬ ಅರ್ಜಿಯನ್ನು ಬೆಂಬಲಿಸಿದ್ದಾರೆ. ತನಿಖೆಯಿಂದ ಎರಡು ಸಾವಿನ ಪ್ರಕರಣಗಳ ಸುತ್ತ ಕವಿದಿರುವ ನಿಗೂಢತೆ ಇನ್ನಾದರೂ ಬಗೆಹರಿಯುವ ನಿರೀಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಈ ಹೊಸ ಬೆಳವಣಿಗೆಗೆ ಪ್ರತಿಕ್ರಿಯಸಿರುವ ಆದಿತ್ಯ ಠಾಕ್ರೆ ಇದು ತನ್ನ ಮತ್ತು ತನ್ನ ಕುಟುಂಬದ ಹೆಸರಿಗೆ ಮಸಿ ಬಳಿಯಲು ಬಿಜೆಪಿ ನಡೆಸಿರುವ ಪಿತೂರಿ. ಇದಕ್ಕೆ ಕೋರ್ಟಿನಲ್ಲೇ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ.
ಆದಿತ್ಯ ಠಾಕ್ರೆ ಅನುಭವಿ ಲೀಡರ್, ಯುವ ಲೀಡರ್. ಭಾರತೀಯ ಜನತಾ ಪಾರ್ಟಿ ಅವರಿಗೆ ಕೆಟ್ಟ ಹೆಸರು ತರಲು ಪ್ಲಾನ್ ಮಾಡ್ತಿದೆ. ನಾವು ಈ ಪ್ಲಾನ್‌ಗೆ ಉತ್ತರ ಕೊಡೋ ಅವಶ್ಯಕತೆ ಇಲ್ಲ. ಕೋರ್ಟ್ ಉತ್ತರ ಕೊಡುತ್ತೆ, ಅಂತ ಶಿವಸೇನೆ ಹೇಳಿದೆ.