ದೇಶಾದ್ಯಂತ ಸುದ್ದಿಯಾದ ಮಲ್ಪೆ ಬಂದರಿನಲ್ಲಿ ನಡೆದ ಘಟನೆ
ಉಡುಪಿ: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಪ್ರಕರಣ ದೇಶಾದ್ಯಂತ ಸುದ್ದಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಘಟನೆಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಮೀನು ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿದ ವೀಡಿಯೊ ಕಂಡು ದಿಗ್ಭ್ರಮೆಯಾಯಿತು. ಕಾರಣವೇನೆ ಇರಲಿ ಒಬ್ಬ ಮಹಿಳೆಗೆ ಈ ರೀತಿ ಕೈಕಾಲು ಕಟ್ಟಿ ಹಲ್ಲೆ ಮಾಡುವುದು ಅಮಾನವೀಯ ಮಾತ್ರವಲ್ಲ, ಗಂಭೀರ ಅಪರಾಧವೂ ಹೌದು. ಇಂತಹ ಅನಾಗರಿಕ ವರ್ತನೆ ಕರ್ನಾಟಕದಂತಹ ಸುಸಂಸ್ಕೃತ ನಾಡಿಗೆ ತಕ್ಕುದಾದುದ್ದಲ್ಲ.
ಕಳ್ಳತನ, ಮೋಸ, ವಂಚನೆಯಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮಲ್ಲಿ ಪೊಲೀಸ್ ಇಲಾಖೆ, ಕಾನೂನು ವ್ಯವಸ್ಥೆ ಎಲ್ಲವೂ ಇದೆ. ದೂರು ದಾಖಲಿಸಿದರೆ ಪೊಲೀಸರು ತನಿಖೆ ನಡೆಸಿ, ಕಾನೂನಿನಡಿಯಲ್ಲಿ ಶಿಕ್ಷಿಸಲು ಸಮರ್ಥರಿರುವಾಗ ಹೀಗೆ ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳುವುದನ್ನು ಸರ್ಕಾರ ಸಹಿಸುವುದಿಲ್ಲ. ಈ ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಘಟನೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಘಾತ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವೀಡಿಯೊ ವೈರಲ್ ಆದ ಬೆಳಕಿಗೆ ಬಂದ ಘಟನೆ
ಮಲ್ಪೆ ಬಂದರಿನಲ್ಲಿ ದೋಣಿಯಿಂದ ಮೀನು ಇಳಿಸುವಾಗ ಓರ್ವ ಮಹಿಳೆ ಒಂದು ಬುಟ್ಟಿಯಷ್ಟು ಸಿಗಡಿ ಮೀನನ್ನು ಕದ್ದು ಮನೆಗೆ ಒಯ್ದಿದ್ದಾರೆಂದು ಆರೋಪಿಸಿ ಕೆಲವು ಮಹಿಳೆಯರು ಮತ್ತು ಪುರುಷರು ಆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸುತ್ತಿರುವ ದೃಶ್ಯ ವೀಡಿಯೊದಲ್ಲಿದೆ. ಮಾ.18ರಂದು ಈ ಘಟನೆ ನಡೆದಿದ್ದು, ಮಾ.19ರಂದು ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಬೆಳಕಿಗೆ ಬಂದಿದೆ.
ಮೀನು ಕದ್ದಿದ್ದಾರೆ ಎಂದೆನ್ನಲಾದ ಮಹಿಳೆ ಮೂಲತಃ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯವರು. ಸುಮಾರು ಐದು ವರ್ಷದಿಂದ ಮಲ್ಪೆ ಬಂದರಿನಲ್ಲಿ ಮೀನು ಇಳಿಸುವ ಕೆಲಸ ಮಾಡುತ್ತಿದ್ದಾರೆ. ಮಾ.18ರಂದು ಈ ಮಹಿಳೆ ಒಂದು ಬುಟ್ಟಿಯಷ್ಟು ಸಿಗಡಿ ಕದ್ದಿದ್ದಾರೆ ಎಂದು ಕೆಲವು ಮಹಿಳೆಯರು ಆರೋಪಿಸಿದ ಬಳಿಕ ಜಟಾಪಟಿ ಶುರುವಾಗಿದೆ. ಆರಂಭದಲ್ಲಿ ಆರೋಪ ನಿರಾಕರಿಸಿದ್ದ ಮಹಿಳೆ ಬಳಿಕ ಕಳ್ಳತನ ಒಪ್ಪಿಕೊಂಡಿದ್ದಾರೆ.
ರಾಜಿಯಲ್ಲಿ ಇತ್ಯರ್ಥವಾಗಿದ್ದ ಪ್ರಕರಣ
ಮಹಿಳೆಯನ್ನು ಕಟ್ಟಿ ಹಾಕಿ ಥಳಿಸಿದ ಪ್ರಕರಣವನ್ನು ಮಾ.18ರಂದೇ ಸ್ಥಳೀಯರು ರಾಜಿ ಪಂಚಾತಿಕೆ ಮಾಡಿ ಮುಗಿಸಿದ್ದರು. ಮಾ.19ರಂದು ಎಲ್ಲರೂ ಮಾಮೂಲಿಯಂತೆ ಕೆಲಸ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದರು. ಆದರೆ ವೀಡಿಯೊ ವೈರಲ್ ಆದ ಬಳಿಕ ಇಡೀ ಘಟನೆ ಬೇರೆಯೇ ತಿರುವು ಪಡೆದುಕೊಂಡಿತು. ಕೂಡಲೇ ಸಂತ್ರಸ್ತ ಮಹಿಳೆ ಮಲ್ಪೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರು.
ಬೋಟಿನಿಂದ ಮೀನು ಇಳಿಸಿದ ಬಳಿಕ ಒಂದು ಬುಟ್ಟಿ ಮೀನು ಸಾರು ಮಾಡಲು ಮನೆಗೆ ಒಯ್ಯುತ್ತಿದ್ದಾಗ ಲಕ್ಷ್ಮಿ, ಶಿಲ್ಪಾ, ಸುಂದರ ಮತ್ತು ಚಂದ್ರ ಎಂಬವರು ತಡೆದು ನಿಲ್ಲಿಸಿ ಕದ್ದುಕೊಂಡು ಹೋಗುತ್ತಿಯಾ, ಎಲ್ಲಿಂದಲೋ ನಮ್ಮ ಊರಿಗೆ ಬಂದು ಮೀನು ಕದಿಯುತ್ತಿಯಾ ಎಂದು ಹೇಳಿ ಥಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಲಕ್ಷಿ, ಶಿಲ್ಪಾ ಮತ್ತು ಸುಂದರ ಬಳಿಕ ಮೈಮೇಲೆ ಕೈ ಹಾಕಿದ್ದಾರೆ, ಹಗ್ಗದಿಂದ ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮೂವರ ಬಂಧನ
ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಮೀನುಗಾರರಾದ ಲಕ್ಷ್ಮಿ, ಶಿಲ್ಪಾ ಮತ್ತು ಸುಂದರ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೋ ಓರ್ವನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಒಂದಿಬ್ಬರು ಮಹಿಳೆಯರು ಮೀನು ಕದ್ದ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸುತ್ತಿದ್ದರೂ ಸುತ್ತಮುತ್ತ ನಿಂತು ನೋಡುತ್ತಿದ್ದ ಹಲವು ಮಂದಿಯಲ್ಲಿ ಯಾರೊಬ್ಬರೂ ಈ ಮಹಿಳೆಯ ಸಹಾಯಕ್ಕೆ ಬಂದಿಲ್ಲ.ರಾಜ್ಯ ಮತ್ತು ದೇಶದ ಬೇರೆಡೆ ಮರಕ್ಕೆ ಕಟ್ಟಿ ಹಾಕಿ ಥಳಿಸುವಂಥ ಕೃತ್ಯಗಳು ನಡೆಯುವುದು ಆಗಾಗ ವರದಿಯಾಗಿರುತ್ತದೆ. ಆದರೆ ಸುಸಂಸ್ಕೃತರ ನಾಡು ಎಂಬ ಹಿರಿಮೆಯಿರುವ ಕರಾವಳಿಯಲ್ಲಿ ಇಂಥ ಕೃತ್ಯಗಳು ನಡೆಯುವುದು ಬಹಳ ಅಪರೂಪ. ಹೀಗಾಗಿ ಈ ಘಟನೆ ಇಡೀ ರಾಜ್ಯದ ಗಮನ ಸೆಳೆದಿದೆ.