ಜಗತ್ತಿನ ದುಬಾರಿ ನಾಯಿಯನ್ನು ಖರೀದಿಸಿದ ಬೆಂಗಳೂರಿನ ಶ್ವಾನಪ್ರೇಮಿ
ಬೆಂಗಳೂರು: ಬೆಂಗಳೂರಿನ ಶ್ವಾನಪ್ರೇಮಿ ಎಸ್. ಸತೀಶ್ ಎಂಬುವರು ಜಗತ್ತಿನ ಅತಿ ದುಬಾರಿ ನಾಯೊಂದನ್ನು ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ. ಈ ನಾಯಿಯ ಬೆಲೆ ಕೇಳಿದರೆ ಬೆಚ್ಚಿಬೀಳುವುದು ಖಂಡಿತ. ಇದು ಬರೋಬ್ಬರಿ 49 ಕೋಟಿ ರೂ. (4.4 ಮಿಲಿಯನ್ ಪೌಂಡ್‌ಗಳು) ಬೆಲೆಬಾಳುವ ಅತ್ಯಂತ ಅಪರೂಪದ ನಾಯಿ. ವೂಲ್ಫ್ ಡಾಗ್ ಎಂಬ ವಿಶೇಷ ತಳಿಯ ಶ್ವಾನವನ್ನು ಅವರು ಇಷ್ಟು ದುಬಾರಿ ಬೆಲೆಕೊಟ್ಟು ಖರೀದಿಸಿ ಬೆಂಗಳೂರಿಗೆ ತಂದಿದ್ದಾರೆ. ಕ್ಯಾಡಬಾಮ್ ಒಕಾಮಿ ಎಂದು ಕರೆಯಲ್ಪಡುವ ಈ ವಿಶಿಷ್ಟ ನಾಯಿ, ತೋಳ ಮತ್ತು ಕಕೇಶಿಯನ್ ಶೆಫರ್ಡ್ ನಡುವಿನ ಮಿಶ್ರತಳಿಯಾಗಿದೆ. ಈ ಬ್ರೀಡ್‌ನ ಮೊದಲನೆ ನಾಯಿ ಇದು ಎನ್ನಲಾಗಿದೆ. ಈ ಮೂಲಕ ಬೆಂಗಳೂರಿನ ಎಸ್. ಸತೀಶ್ ಜಗತ್ತಿನ ಅತಿ ದುಬಾರಿ ನಾಯಿಯ ಒಡೆಯರೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಅಮೆರಿಕದಲ್ಲಿ ಜನಿಸಿದ ಕ್ಯಾಡಬಾಮ್ ಒಕಾಮಿ ಕೇವಲ 8 ತಿಂಗಳ ವಯಸ್ಸಿನಲ್ಲಿ 75 ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕ ಹೊಂದಿದೆ. ಇದಕ್ಕೆ ಹಸಿವು ಜಾಸ್ತಿ. ಪ್ರತಿದಿನ ಸುಮಾರು 3 ಕೆಜಿ ಹಸಿಮಾಂಸ ತಿನ್ನುತ್ತದೆ. ಕಾಡು ತೋಳದ ಹೋಲಿಕೆ ಹೆಚ್ಚಾಗಿರುವ ಈ ನಾಯಿ ನೋಡಲು ದೈತ್ಯವಾಗಿರುತ್ತದೆ. ಈ ತಳಿಯ ನಾಯಿ ಶ್ವಾನಪ್ರಿಯರ ಕುತೂಹಲ ಕೆರಳಿಸಿದೆ.

ಎಸ್.ಸತೀಶ್ ಬೆಂಗಳೂರಿನ ಪ್ರಸಿದ್ಧ ಶ್ವಾನಪ್ರೇಮಿ. ಅವರು 150ಕ್ಕೂ ಹೆಚ್ಚು ವಿವಿಧ ತಳಿಗಳ ನಾಯಿಗಳನ್ನು ಹೊಂದಿದ್ದಾರೆ. ಇವರೀಗ ಕ್ಯಾಡಬಾಮ್ ಒಕಾಮಿ ಎಂಬ ಅಪರೂಪದ ವೂಲ್ಫ್ ಡಾಗ್‌ಗಾಗಿ ಸುಮಾರು 50 ಕೋಟಿ ರೂ. ಖರ್ಚು ಮಾಡಿದ್ದಾರೆ. ಎಸ್.ಸತೀಶ್ ಅವರು 10 ವರ್ಷಗಳ ಹಿಂದೆ ನಾಯಿಗಳ ಸಾಕಣೆಯನ್ನು ನಿಲ್ಲಿಸಿದರು. ಆದರೆ ಈಗ ತಮ್ಮ ಅಪರೂಪದ ಸಾಕುಪ್ರಾಣಿಗಳನ್ನು ಕಾರ್ಯಕ್ರಮಗಳಲ್ಲಿ ಪ್ರದರ್ಶಿಸುತ್ತಿದ್ದಾರೆ.
ಅವರ ಸಂಗ್ರಹಕ್ಕೆ ಇತ್ತೀಚಿನ ಸೇರ್ಪಡೆಯಾದ ಒಕಾಮಿಯನ್ನು ಅಮೆರಿಕದಲ್ಲಿ ಬೆಳೆಸಲಾಗಿದೆ. ಫೆಬ್ರವರಿಯಲ್ಲಿ ಬ್ರೋಕರ್ ಮೂಲಕ ಈ ನಾಯಿಯನ್ನು ಸತೀಶ್ ಖರೀದಿಸಿದ್ದಾರೆ. ಕೇವಲ 8 ತಿಂಗಳ ವಯಸ್ಸಿನ ನಾಯಿಮರಿಯಾದರೂ ಈಗಾಗಲೇ 75 ಕೆಜಿ ತೂಕವಿದ್ದು, 30 ಇಂಚು ಎತ್ತರವಿದೆ. ಈ ತಳಿಯನ್ನು ಈ ಹಿಂದೆ ಜಗತ್ತಿನಲ್ಲಿ ಎಲ್ಲೂ ಮಾರಾಟ ಮಾಡಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಒಕಾಮಿಯ ಮೂಲ ತಳಿಗಳಲ್ಲಿ ಒಂದಾದ ಕಕೇಶಿಯನ್ ಶೆಫರ್ಡ್ಸ್ ತಮ್ಮ ಶಕ್ತಿ ಮತ್ತು ರಕ್ಷಣಾತ್ಮಕ ಪ್ರವೃತ್ತಿಗೆ ಹೆಸರುವಾಸಿಯಾಗಿವೆ. ಈ ನಾಯಿಗಳು ಜಾರ್ಜಿಯಾ, ಅರ್ಮೇನಿಯಾ, ಅಜೆರ್ಬೈಜಾನ್ ಮತ್ತು ರಷ್ಯಾದ ಕೆಲವು ಶೀತ ಪ್ರದೇಶಗಳಲ್ಲಿ ಕಂಡು ಬರುತ್ತವೆ. ತೋಳಗಳಂತಹ ಪ್ರಾಣಿಗಳಿಂದ ಜಾನುವಾರುಗಳನ್ನು ರಕ್ಷಿಸಲು ಇವುಗಳನ್ನು ಹೆಚ್ಚಾಗಿ ಕಾವಲು ನಾಯಿಗಳಾಗಿ ಬಳಸಲಾಗುತ್ತದೆ.