75 ಕೋ. ರೂ. ಮಾದಕ ವಸ್ತು ವಶವಾದ ಬೆನ್ನಲ್ಲೇ ಇನ್ನೊಂದು ಪ್ರಕರಣ
ಬೆಂಗಳೂರು : ಮಂಗಳೂರು ಸಿಸಿಬಿ ಪೊಲೀಸರು ಕೆಲದಿನಗಳ ಹಿಂದೆ ಬೆಂಗಳೂರಿನಲ್ಲಿ ರಾಜ್ಯದಲ್ಲೇ ಅತಿದೊಡ್ಡ ಪ್ರಕರಣವಾದ 75 ಕೋ.ಟಿ ರೂ. ಮೌಲ್ಯದ ಮಾದಕವಸ್ತು ವಶಪಡಿಸಿಕೊಂಡ ಬೆನ್ನಲ್ಲೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 38 ಕೋ.ರೂ. ಮೌಲ್ಯದ ಕೊಕೇನ್ ವಶವಾಗಿದೆ.
ವಿಮಾನ ನಿಲ್ದಾಣದ ಕಂದಾಯ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಘಾನಾ ದೇಶದ ಮಹಿಳೆಯೊಬ್ಬಳನ್ನು ಬಂಧಿಸಿ 38.4 ಕೋಟಿ ರೂ. ಮೌಲ್ಯವಿರುವ 3.186 ಕೆಜಿ ಕೊಕೇನ್ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.
ಜೆನ್ನಿಫರ್ ಅಬ್ಬೆ ಎಂದು ಗುರುತಿಸಲಾದ ಈ ಮಹಿಳೆ ಬುಧವಾರ ಬೆಳಗ್ಗಿನ ವಿಮಾನದಲ್ಲಿ ದೋಹಾ ಕತಾರ್‌ನಿಂದ ಕೊಕೇನ್ ಸಹಿತ ಬಂದಿದ್ದಳು. ಕೊಕೇನ್ ಸಾಗಾಟದ ಸುಳಿವು ಸಿಕ್ಕಿದ್ದ ಡಿಆರ್‌ಐ ಅಧಿಕಾರಿಗಳು ಆಕೆಯ ದೇಹ ಪರಿಶೋಧಿಸಿದಾಗ ಮಾದಕವಸ್ತು ಪತ್ತೆಯಾಗಿದೆ. ನಂತರ ಅವಳನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.
ಬೆಂಗಳೂರು ಮಾದಕ ವಸ್ತು, ಚಿನ್ನ ಕಳ್ಳ ಸಾಗಾಟದ ಕೇಂದ್ರವಾಗುತ್ತಿದೆ ಎಂಬ ಆತಂಕ ವ್ಯಕ್ತವಾಗುತ್ತಿರುವಾಗಲೇ ಇನ್ನೊಂದು ದೊಡ್ಡ ಪ್ರಮಾಣದ ಮಾದಕ ವಸ್ತು ಸಾಗಾಟ ಕೆಲವೇ ದಿನಗಳ ಅಂತರದಲ್ಲಿ ಬಯಲಾಗಿದೆ. ಬೆಂಗಳೂರು ಮೂಲಕ ಇಡೀ ದೇಶಕ್ಕೆ ಮಾದಕ ವಸ್ತು ಪೂರೈಸುವ ಜಾಲವೊಂದು ಸಕ್ರಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ವಿದೇಶಿ ಮಹಿಳೆಯರು ಸೆರೆಯಾಗಿದ್ದರು.