ಪುತ್ತೂರು: ಮನುಷ್ಯನ ಮನಸ್ಸಿಗೆ ಶಾಂತಿ ಹಾಗೂ ಸಂತೋಷ ಎಂಬುದು ಬಹಳ ಮುಖ್ಯ, ಇದು ಕಲೆಯನ್ನು ಆರಾಧಿಸುವುದರಿಂದ ಸಾಧ್ಯವಾಗುತ್ತದೆ. ಅದರೊಂದಿಗೆ ವೃತ್ತಿ ಜೀವನಕ್ಕೆ ಕಾಲಿಟ್ಟಾಗ ಒತ್ತಡದ ಜೀವನ ನಿರ್ವಹಣೆಗೂ ಕಲೆ ಸಹಕಾರಿಯಾಗುತ್ತದೆ. ಮುಂದಿನ ಸಾಂಸ್ಕೃತಿಕ ರಾಯಭಾರಿಗಳಾದ ವಿದ್ಯಾರ್ಥಿಗಳು ಕಲೆಯ ಮೌಲ್ಯವನ್ನು ಅರಿತುಕೊಂಡು ವಿವೇಕ ಉಳ್ಳವರಾಗಿ ಬದುಕಬೇಕು ಎಂದು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ಹೇಳಿದರು.
ಅವರು ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಲಲಿತ ಕಲಾ ಸಂಘ,ವಿದ್ಯಾರ್ಥಿ ಸಂಘ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಕಾಲೇಜಿನ ಸ್ನಾತಕ ವಿಭಾಗದ ಷಷ್ಟ್ಯಬ್ದ ಹಾಗೂ ಸ್ನಾತಕೋತ್ತರ ವಿಭಾಗದ ದಶಮಾನೋತ್ಸವ ಸವಿನೆನಪಿಗಾಗಿ ನಡೆಯುವ ವಿವೇಕಾನಂದ ಜಯಂತಿ 2025 ರ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು “ವಿವೇಕೋತ್ಸವ-2025” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಅಧ್ಯಕ್ಷತೆ ವಹಿಸಿ, ಸಾಂಸ್ಕೃತಿಕ ಕಲೆಗಳಿಗೆ ಒಂದು ಅದ್ಭುತವಾದ ಶಕ್ತಿ ಇದ್ದು, ಇದು ಬದುಕನ್ನು ರೂಪಿಸುವುದಕ್ಕೆ ಸಹಾಯನ್ನು ಮಾಡುತ್ತದೆ. ನಮ್ಮ ಕಾಲೇಜಿನ ಅದೆಷ್ಟೋ ಹಿರಿಯ ವಿಧ್ಯಾರ್ಥಿಗಳು ಕಲೆ, ಸಾಹಿತ್ಯ , ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರುಳಿಕೃಷ್ಣ ಕೆ. ಎನ್ ಶುಭ ಹಾರೈಸಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ಸ್ನಾತಕೋತ್ತರ ಅಧ್ಯಯನ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಮತ್ತು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ಆಶಿಶ್ ಆಳ್ವ ಉಪಸ್ಥಿತರಿದ್ದರು.
ಸುಮಾರು 20 ಕ್ಕೂ ಹೆಚ್ಚು ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮನಮೋಹನ ಎಂ ಸ್ವಾಗತಿಸಿ, ಐಕ್ಯೂಎಸಿ ಘಟಕದ ಸಂಯೋಜಕಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರವಿಕಲಾ ವಂದಿಸಿದರು. ವಿದ್ಯಾರ್ಥಿನಿ ಮಾನಸ ಎ. ನಿರ್ವಹಿಸಿದರು.