ತೆಂಕುತಿಟ್ಟಿನ ಹಿರಿಯ ಮದ್ಲೆಗಾರ ಬಿ.ಗೋಪಾಲಕೃಷ್ಣ ಕುರುಪ್ ನಿಧನ

ಯಕ್ಷಗಾನ ಕ್ಷೇತ್ರದಲ್ಲಿ ಭಾಗವತರಾಗಿ, ಮದ್ದಳೆಗಾರರಾಗಿ  ಮತ್ತು ಯಕ್ಷಗಾನದ ಪರಂಪರೆಯ ಬಗ್ಗೆ ಅಪೂರ್ವ ಜ್ಞಾನವನ್ನು ಹೊಂದಿದ್ದ  ರಾಜ್ಯ ಪ್ರಶಸ್ತಿ ಪುರಸ್ಕೃತ  ಬಿ.ಗೋಪಾಲಕೃಷ್ಣ ಕುರುಪ್ (90ವರ್ಷ) ಮಾರ್ಚ್ 19 ರಂದು ನಿಧನರಾದರು.

ಚೆಂಡೆ-ಮದ್ದಲೆ ನುಡಿತಗಳಲ್ಲಿ ಅಪೂರ್ವಜ್ಞಾನವನ್ನು ಪಡೆದುಕೊಂಡಿದ್ದ ಕುರುಪರು ಅದನ್ನು ಪಠ್ಯರೂಪದಲ್ಲಿ ದಾಖಲಿಸಿದ ಮೊದಲಿಗರಾಗಿದ್ದರು.

1952 ರಲ್ಲಿ ಕೂಡ್ಲು ಮೇಳದಲ್ಲಿ ಪೂರ್ವರಂಗಕ್ಕೆ ಹಾಡುವ ಅವಕಾಶದೊಂದಿಗೆ ಮದ್ಲೆಗಾರ ಕುದ್ರೆಕೂಡ್ಲು ರಾಮಭಟ್ ಇವರ ಮಾರ್ಗದರ್ಶನದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಮುಂದುವರಿದರು.  ಹಿರಿಯ ಬಲಿಪ ನಾರಾಯಣ ಭಾಗವತ,  ಅಗರಿ ಶ್ರೀನಿವಾಸ ಭಾಗವತ,  ಕುದ್ರೆಕೂಡ್ಲು ರಾಮ ಭಟ್ಟ, ನಾರಂಪಾಡಿ  ಸುಬ್ಬಯ ಶೆಟ್ಟಿ, ನೆಡ್ಲೆ ನರಸಿಂಹ ಭಟ್ಟರ ಗುರುತನದಲ್ಲಿ ಸಿದ್ಧಿಯನ್ನು ಪಡೆದರು.

































 
 

ಮೃದಂಗ ವಿದ್ವಾನ್ ಟಿ. ಆರ್. ಕೃಷ್ಣನ್ರಲ್ಲಿ ಮೃದಂಗ ನುಡಿತದ ಸೂಕ್ಷ್ಮಗಳನ್ನು ಕಲಿತಿದ್ದರು. ಯಕ್ಷಗಾನ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. 80 ರ ದಶಕದಲ್ಲಿ  ಕು. ಶಿ. ಹರಿದಾಸ ಭಟ್ಟ, ಮುಳಿಯ ಮಹಾಬಲ ಭಟ್ಟರ ನೇತೃತ್ವದಲ್ಲಿ ಉಡುಪಿ ಎಂ.ಜಿ.ಎಂ ಕಾಲೇಜಿನ ಆರ್ಆರ್ಸಿಯಲ್ಲಿ ಜರಗಿದ ಹಿಮ್ಮೇಳದ ದಾಖಲಾತಿ ಕಮ್ಮಟದಲ್ಲಿ  ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಸುಳ್ಯದ ತೆಂಕುತಿಟ್ಟು ಹಿತರಕ್ಷಣ ವೇದಿಕೆಯ ಬಲಿಪ ನಾರಾಯಣ ಭಾಗವತರ ಹಾಡುಗಳ ದಾಖಲೀಕರಣದ ಸಂದರ್ಭದಲ್ಲಿ ಕುರುಪರ ಮದ್ದಲೆವಾದನವು ಪರಂಪರೆಯ ಕ್ರಮವನ್ನು ಹೊಸ ತಲೆಮಾರಿಗೆ ಪರಿಚಯಿಸಿತು.

ಯಕ್ಷಗಾನ ಕೃತಿಗಳು: ‘ತೆಂಕುತಿಟ್ಟು-ಪ್ರಾಥಮಿಕ ಯಕ್ಷಗಾನ ಪಾಠಗಳು’ (ಪೂರ್ವರಂಗ) ಕೃತಿಯನ್ನು ಧರ್ಮಸ್ಥಳದ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಪ್ರಕಾಶನಗೊಳಿಸಿದ್ದರು.

ತೆಂಕುತಿಟ್ಟು ಯಕ್ಷಗಾನದ ಮದ್ದಲೆವಾದನ ಕ್ರಮವನ್ನು ಕಾರ್ಕಳದ ವಾಣಿ ಯಕ್ಷಗಾನ ಸಭಾ,ತೆಂಕುತಿಟ್ಟು ಯಕ್ಷಗಾನದ ಚೆಂಡೆವಾದನ ಕ್ರಮ ಕೃತಿಯನ್ನು ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರ ಉಡುಪಿ ಪ್ರಕಟಿಸಿದೆ.

ಯಕ್ಷಗಾನದ ತಾಳ ಸಂಬಂಧಿ  ‘ತಿತ್ತಿತೈ’ ಎಂಬ ಕೃತಿ  ಹಿಮ್ಮೇಳ ವಿಭಾಗಕ್ಕೆ ಅವರ ಇನ್ನೊಂದು ದೊಡ್ಡ ಕೊಡುಗೆಯಾಗಿದೆ. 

ಯಕ್ಷಗಾನದ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಾಲ್ಕು ಶಾಸ್ತ್ರೀಯ ಕೃತಿಗಳ ರಚನೆಯೊಂದಿಗೆ ಶಿಶಿಲ, ಅರಸಿನಮಕ್ಕಿ  ಪರಿಸರದಲ್ಲಿ ಬುಡಕಟ್ಟು ದಲಿತ ಮತ್ತು ಗಿರಿಜನ ವರ್ಗಗಳ ಮಹಿಳೆಯರಿಗೆ ಯಕ್ಷಗಾನ ಕಲಿಸುವಿಕೆ, 1955 ರಿಂದ 1985 ರ ವರೆಗೆ  ಬೆಳ್ತಂಗಡಿ, ಪುತ್ತೂರು, ಸುಳ್ಯಹಾಗೂ, ಕೇರಳ, ಮುಂಬೈಯಲ್ಲಿಯೂ ಹಿಮ್ಮೇಳ ತರಗತಿಗಳನ್ನು  ನಡೆಸಿದ್ದಾರೆ.  

ಮೈಸೂರಿನ ಮಹಾಮಹೋಪಾಧ್ಯಾಯ ಡಾ. ರಾ. ಸತ್ಯನಾರಾಯಣ ಅವರು ಕುರುಪರ ಕೃತಿಗಳನ್ನು ಯಕ್ಷಗಾನ ಕ್ಷೇತ್ರದ ಪಾಂಡಿತ್ಯಪೂರ್ಣ ಕೊಡುಗೆಗಳೆಂದು ಶ್ಲಾಘಿಸಿದ್ದರು. ‘ಚೆಂಡೆ-ಮದ್ದಲೆಗಳ ನಡುವೆ’ ಎಂಬ  ಆತ್ಮಕಥನವನ್ನು ಮತ್ತು ಕಾಶಿಯಾತ್ರೆಯೆಂಬ ಪ್ರವಾಸ ಕಥನವನ್ನು ಪ್ರಕಟಿಸಿದ್ದಾರೆ.

ಧರ್ಮಸ್ಥಳ, ಕರ್ನಾಟಕ, ಬಳ್ಳಂಬೆಟ್ಟು, ಇರಾ,ಸುರತ್ಕಲ್, ಪೊಳಲಿ, ಕುಂಬ್ಳೆ ಮೊದಲಾದ ಯಕ್ಷಗಾನ ಮೇಳಗಳಲ್ಲಿ  ತಿರುಗಾಟ ನಡೆಸಿರುವ ಕುರುಪ್ ಅವರು

 ಶ್ರೀ ಕ್ಷೇತ್ರ ಧರ್ಮಸ್ಥಳ ಲಲಿತ ಕಲಾ ಯಕ್ಷಗಾನ ಕೇಂದ್ರದಲ್ಲಿ ಮೂರು ವರ್ಷ ಹಿಮ್ಮೇಳದ ಗುರುಗಳಾಗಿ ಸೇವೆ ಸಲ್ಲಿಸಿದ್ದರು.

 ಬೆಳ್ತಂಗಡಿ ತಾಲೂಕು ಸಾಹಿತ್ಯ ಸಮ್ಮೇಳನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಶ್ರೀ ಕ್ಷೇತ್ರ ಧರ್ಮಸ್ಥಳ,ಶ್ರೀ ಎಡನೀರು ಮಠ, ಮಂಗಳೂರು ವಿಶ್ವವಿದ್ಯಾನಿಲಯದ  ಕರಾವಳಿ ಯಕ್ಷಗಾನ ಸಮ್ಮೇಳನ, ಜಾನಪದ ಲೋಕ ಬೆಂಗಳೂರು ಇವರನ್ನು ಗೌರವಿಸಿದೆ. 2023ರಲ್ಲಿ ಉಡುಪಿಯಲ್ಲಿ ಜರಗಿದ ಅಖಿಲ ಭಾರತ ಯಕ್ಷಗಾನ ಪ್ರಥಮ ಸಮ್ಮೇಳನದಲ್ಲಿ  ಗೋಪಾಲಕೃಷ್ಣ ಕುರುಪ್  ಇವರನ್ನು ಗೌರವಿಸಲಾಗಿದೆ.

 ಚಂದ ಕುರುಪ್ ಮತ್ತು ಕಾವೇರಿ ದಂಪತಿಯರ ಪುತ್ರನಾಗಿ ದಿನಾಂಕ 5. 12. 1935 ರಲ್ಲಿ ಜನಿಸಿದ ಇವರು ಐದನೇ ತರಗತಿವರೆಗಿನ ಶಿಕ್ಷಣವನ್ನು ಮಾತ್ರ ಪಡೆದಿರುತ್ತಾರೆ. ತಂದೆಯವರು ಯಕ್ಷಗಾನ ಕಲಾವಿದರಾಗಿದ್ದುದರಿಂದ ಅವರೇ ಆರಂಭಿಕ ಗುರುಗಳಾಗಿದ್ದರು.

 ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಬರ್ಗುಳದಲ್ಲಿ ಬಹುಕಾಲ ವಾಸವಿದ್ದ ಅವರು ಇತ್ತೀಚೆಗೆ  ಕೇರಳದ ನೀಲೇಶ್ವರದ ಮಗಳ ಮನೆಯಲ್ಲಿ ನೆಲೆಸಿದ್ದರು.

ಗೋಪಾಲಕೃಷ್ಣ ಕುರುಪ್ ಅವರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top