ಪುತ್ತೂರು : ಮಂಗಳೂರು-ಬೆಂಗಳೂರು ರಸ್ತೆಯ ದುರಸ್ಥಿತಿ ಹಾಗೂ ಮಂಗಳೂರು ಮೆಡಿಕಲ್ ಮತ್ತು ಎಜುಕೇಶನ್ ಹಬ್ ಆಗಿದ್ದರೂ, ಸರಿಯಾದ ರಸ್ತೆ ಸಂಪರ್ಕದ ಕೊರತೆಯಿಂದ ವ್ಯಾಪಾರ ಹಾಗೂ ಸಾರಿಗೆ ವ್ಯವಸ್ಥೆ ತೀವ್ರ ಅಡಚಣೆಯಾಗುತ್ತಿದೆ ಎಂದು ಎಂ.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಇಂದು ವಿಧಾನ ಪರಿಷತ್ತಿನಲ್ಲಿ ಚರ್ಚಿಸಿದ್ದಾರೆ.
ಈ ಹಿಂದೆ ಮಾನ್ಯ ಉಪಮುಖ್ಯಮಂತ್ರಿಗಳು “ಮಂಗಳೂರು ಸಂಜೆ 8 ಗಂಟೆಗೆ ಬಂದ್ ಆಗುತ್ತದೆ” ಎಂದು ಹೇಳಿದ ಕಾರಣಕ್ಕೂ ಸಮರ್ಪಕ ರಸ್ತೆ ಸಂಪರ್ಕದ ಅಭಾವವೇ ಕಾರಣ ಎಂಬುದಾಗಿ ಶಾಸಕರು ಪರಿಷತ್ತಿನಲ್ಲಿ ತಿಳಿಸಿದ್ದಾರೆ.
ಬೆಂಗಳೂರು-ಮಂಗಳೂರು ನಡುವಿನ ರಸ್ತೆ ಸಮಸ್ಯೆಯಿಂದಾಗಿ, ಬೆಂಗಳೂರು ಜನರು ಮಾಸ್ತ್ಯಾಹಾರವನ್ನು ಮಂಗಳೂರಿನ ಬದಲಿಗೆ ಚೆನ್ನೈ ಅಥವಾ ಆಂಧ್ರದಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇದರ ಪ್ರಮುಖ ಕಾರಣ ಕಡಿದಾದ ರಸ್ತೆ ಮತ್ತು ಅತಿಯಾದ ಸಾರಿಗೆ ವೆಚ್ಚ. ಇದೇ ತೊಂದರೆ ಬೆಂಗಳೂರಿನಿಂದ ಮಂಗಳೂರಿಗೆ ತರಕಾರಿ ಸಾಗಾಟಕ್ಕೂ ಹಿನ್ನಡೆಯಾಗುತ್ತಿದೆ.
ಸಚಿವರು ಚತುಷ್ಪಥ ರಸ್ತೆ ನಿರ್ಮಾಣದ ಭರವಸೆ ನೀಡಿದರೂ, ಜಿಲ್ಲಾಧಿಕಾರಿಗಳು ಕೆಲವು ಪ್ರದೇಶಗಳಲ್ಲಿ ಅನುಮತಿ ನೀಡುತ್ತಿಲ್ಲ ಎಂದು ಲಿಖಿತವಾಗಿ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಮಂಗಳೂರು ಸಂಸದರಾದ ಶ್ರೀ ಬ್ರಿಜೇಶ್ ಚೌಟ ಅವರು ಕೇಂದ್ರ ಸಾರಿಗೆ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಆದರೆ ಕೇಂದ್ರ ಸಾರಿಗೆ ಸಚಿವರು, ಸ್ಥಳೀಯ ಅರಣ್ಯ ಇಲಾಖೆ ಸಮಯಕ್ಕೆ ಸರಿಯಾಗಿ ಅನುಮತಿ ನೀಡುತ್ತಿಲ್ಲ ಎಂಬುದಾಗಿ ಹೇಳಿದ್ದಾರೆ.
ಈ ಕುರಿತು ಮಾನ್ಯ ಲೋಕೋಪಯೋಗಿ ಸಚಿವರು ಗಂಭೀರವಾಗಿ ಪರಿಗಣಿಸಿ, ಸ್ಥಳೀಯ ಶಾಸಕರು, ಸಂಸದರು, ಅಧಿಕಾರಿಗಳು ಮತ್ತು ಸಂಬಂಧಪಟ್ಟ ಸಚಿವರೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು.