ಭಾರತದ ಕಾಲಮಾನ ಪ್ರಕಾರ ಬುಧವಾರ ಬೆಳಗ್ಗೆ 3.27ಕ್ಕೆ ಫ್ಲೋರಿಡಾ ಕರಾವಳಿಯಲ್ಲಿ ಭೂಸ್ಪರ್ಶ
ನ್ಯೂಯಾರ್ಕ್: ಕಳೆದ 9 ತಿಂಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಜ್ ವಿಲ್ಮೋರ್ ಅವರ ಭೂಮಿಗೆ ಮರಳುವ ಪ್ರಯಾಣ ಶುರುವಾಗಿದ್ದು, ನಾಸಾ ಇದನ್ನು ನೇರ ಪ್ರಸಾರ ಮಾಡುತ್ತಿದೆ. ಅಮೆರಿಕ ಕಾಲಮಾನ ಪ್ರಕಾರ ಮಂಗಳವಾರ ಸಂಜೆ ಸುನೀತಾ ವಿಲ್ಲಿಯಮ್ಸ್ ಹೊತ್ತ ಗಗನನೌಕೆ ಭೂಸ್ಪರ್ಶ ಮಾಡಲಿದೆ. ಈ ಇಬ್ಬರು ಗಗನಯಾತ್ರಿಗಳು ಫ್ಲೋರಿಡಾ ಕರಾವಳಿಯಲ್ಲಿ ಇಳಿಯಲಿದ್ದು, ಈ ಅಪರೂಪದ ಕ್ಷಣಗಳನ್ನು ನಾಸಾ ನೇರಪ್ರಸಾರ ಮಾಡಲಿದೆ.
ಅಮೆರಿಕದ ಕಾಲಮಾನದಂತೆ ಸೋಮವಾರ ರಾತ್ರಿ 10.45ಕ್ಕೆ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಹ್ಯಾಚ್ ಅನ್ನು ಮುಚ್ಚುವ ಸಿದ್ಧತೆಗಳೊಂದಿಗೆ ಸುನೀತಾ ವಿಲ್ಲಿಯಮ್ಸ್ ಭೂಮಿಗೆ ಮರಳುವ ಪ್ರಕ್ರಿಯೆಯನ್ನು ಶುರುಮಾಡಲಾಗಿದೆ. ಭೂಸ್ಪರ್ಶದ ಎಲ್ಲ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿವೆ. ಅಮೆರಿಕದ ಗಗನಯಾತ್ರಿ ನಿಕ್ ಹಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗುರ್ಬನೊವ್ ಸ್ಪೇಸ್‌ಎಕ್ಸ್ ಕ್ರೂ-9 ಡ್ರ್ಯಾಗನ್ ಗಗನನೌಕೆಯಲ್ಲಿ ಅವರನ್ನು ಕರೆತರಲು ಅಂತರಿಕ್ಷಕ್ಕೆ ಹೋಗಿದ್ದಾರೆ.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಸ್ಪೇಸ್‌ಎಕ್ಸ್ ಕ್ರೂ-9 ಹಿಂದಿರುಗುವಿಕೆಯ ನೇರ ಪ್ರಸಾರವನ್ನು NASA ನೀಡಲಿದೆ ಎಂದು ಸಂಸ್ಥೆ X ನಲ್ಲಿ ತಿಳಿಸಿದೆ. ಅಮೆರಿಕದ ಸ್ಥಳೀಯ ಕಾಲಮಾನದ ಪ್ರಕಾರ ಮಂಗಳವಾರ ಸಂಜೆ 5.57ಕ್ಕೆ (ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 3.27) ಸುನೀತಾ ವಿಲಿಯಮ್ಸ್ ಮತ್ತು ಬುಜ್ ವಿಲ್ಮೋರ್ ಭೂಮಿಗೆ ತಲುಪಲಿದ್ದಾರೆ.
ಸುನನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಕಳೆದ ವರ್ಷ ಜೂನ್ 5ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಅದಾದ ಬಳಿಕ ಕೇವಲ ಒಂದು ವಾರದ ನಂತರ ಅವರು ಭೂಮಿಗೆ ಮರಳಬೇಕಿತ್ತು. ಆದರೆ ಬೋಯಿಂಗ್ ಸ್ಟಾರ್‌ಲೈನರ್‌ನ ತಾಂತ್ರಿಕ ದೋಷದಿಂದಾಗಿ ಕಾರ್ಯದಿಂದಾಗಿ ಇಬ್ಬರೂ ಅಲ್ಲಿಯೇ ಸಿಲುಕಿಕೊಂಡರು. ಈಗ ಅವರನ್ನು ಮರಳಿ ತರಲು ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಳಸಲಾಗುತ್ತಿದೆ. ಇಬ್ಬರು ಗಗನಯಾತ್ರಿಗಳು ಮಂಗಳವಾರ ಸಂಜೆ ಇತರ ಇಬ್ಬರು ಪ್ರಯಾಣಿಕರೊಂದಿಗೆ ಭೂಮಿಗೆ ಮರಳಲಿದ್ದಾರೆ.