ಪುತ್ತೂರು : ನರಿಮೊಗರಿನ ಸರಸ್ವತಿ ವಿದ್ಯಾಮಂದಿರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ಇದರ ಪುತ್ತೂರು ತಾಲೂಕು ಘಟಕದ ವತಿಯಿಂದ ನೂತನ ವರ್ಷದ ಕಾರ್ಯಕ್ರಮ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಶಾಲಾ ಸಂಚಾಲಕ ಅವಿನಾಶ್ ಕೊಡಂಕಿರಿಯವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸಾಹಿತ್ಯದ ಬಲಗೊಳ್ಳುವಿಕೆಯೊಂದೇ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಹೆದ್ದಾರಿ ಎಂದರು. ಇಂತಹ ಕೈಂಕರ್ಯಗಳಲ್ಲಿ ಸರಸ್ವತಿ ವಿದ್ಯಾಮಂದಿರ ಯಾವತ್ತೂ ಮುಂಚೂಣಿಯಲ್ಲಿ ನಿಲ್ಲುತ್ತದೆ ಎಂದು ಹೇಳಿ ಸಂಘಟಕರ ಕಾರ್ಯವನ್ನು ಶ್ಲಾಘಿಸಿದರು
ಶಾಂತಿಗೋಡಿನ ಖ್ಯಾತ ಚಿಂತಕರೂ, ವಿಮರ್ಶಕರೂ ಆಗಿರುವ ಸಾಹಿತಿ ಲಕ್ಷ್ಮೀಶ ತೋಳ್ಪಾಡಿಯವರು ‘ಯಕ್ಷ ಪ್ರಶ್ನೆ’ ವಿಚಾರವಾಗಿ ವಿದ್ವತ್ ಪೂರ್ಣವಾದ ವಿಚಾರಧಾರೆಯನ್ನು ಮಂಡಿಸಿದರು. ಸೋತವನ ದುಃಖವನ್ನು ಕೇಳುವವರು ಇದ್ದಾರೆ. ಆದರೆ ಗೆದ್ದವರ ದುಃಖವನ್ನು ಕೇಳುವವರೇ ಇಲ್ಲ ಎಂದು ಅವರು ಧರ್ಮರಾಯನ ಉದಾಹರಣೆಯನ್ನು ನೀಡಿ ವಿಶ್ಲೇಷಿಸಿದರು. ಮಹಾಭಾರತದ ಅರಣ್ಯ ಪರ್ವದ ಕೊನೆಯಲ್ಲಿ ನಡೆದ ‘ಯಕ್ಷ ಪ್ರಶ್ನೆ’ ಪ್ರಸಂಗವನ್ನು ಮಾರ್ಮಿಕವಾಗಿ ವಿವರಿಸಿದ ಅವರು ನೈಮಿತ್ತಿಕ ಜೀವನದಲ್ಲಿ ಅದರ ಅನ್ವಯಿಕತೆಯನ್ನು ಮನದಟ್ಟು ಮಾಡಿಕೊಟ್ಟರು.

ಸಭಾಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾಲೇಜಿನ ಅಧ್ಯಕ್ಷರಾದ ಡಾ. ಶ್ರೀಪತಿ ಕಲ್ಲೂರಾಯರು ಕುಸಿಯುತ್ತಿರುವ ಶೈಕ್ಷಣಿಕ ಮೌಲ್ಯಗಳ ಕುರಿತು ಮಾತನಾಡಿ ಇದಕ್ಕೆ ಸಾಹಿತ್ತಿಕ ಚಟುವಟಿಕೆಗಳು ಪರ್ಯಾಯವಾಗಿವೆ ಎಂದರು. ವಿಭಾಗ ಪ್ರಮುಖ ಸುಂದರ ಶೆಟ್ಟಿಯವರು ಉಪಸ್ಥಿತರಿದ್ದರು.
ತಾಲೂಕು ಸಮಿತಿಯ ಅಧ್ಯಕ್ಷರಾದ ಗಣರಾಜ ಕುಂಬ್ಳೆಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿ ಶಿಕ್ಷಕಿ ಶ್ರೀಲಕ್ಷ್ಮಿ ಮೊಳೆಯಾರ್ ವಂದಿಸಿದರು. 10ನೆ ತರಗತಿಯ ವಿದ್ಯಾರ್ಥಿನಿ ಲಿಖಿತಾ ಪ್ರಾರ್ಥಿಸಿ ತಾಲೂಕು ಸಮಿತಿಯ ಕಾರ್ಯದರ್ಶಿ ಚೇತನ್ ಮೊಗ್ರ ಕಾರ್ಯಕ್ರಮವನ್ನು ನಿರೂಪಿಸಿದರು. ಮುಖ್ಯ ಶಿಕ್ಷಕಿ ದಿವ್ಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ್ವಾರಕಾ ಪ್ರತಿಷ್ಠಾನದ ಗೋಪಾಲಕೃಷ್ಣ ಭಟ್ ಅತಿಥಿಗಳನ್ನು ಗೌರವಿಸಿ ಶಾಲೆಗೆ ಪುಸ್ತಕಗಳನ್ನು ನೀಡಿದರು.