ಗ್ಯಾರಂಟಿಯಿಂದಾಗಿ ಸರಕಾರಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ

ಸರಕಾರಿ ನೌಕರರು ಸೇವೆ ಎಂದು ಭಾವಿಸಿ ಕೆಲಸ ಮಾಡಿ ಎಂಬುದಾಗಿ ವಿನಂತಿ ಮಾಡಿಕೊಂಡ ಮುಖ್ಯಮಂತ್ರಿ

ಹೈದರಾಬಾದ್‌: ಬಿಟ್ಟಿ ಯೋಜನೆಗಳನ್ನು ಕೊಟ್ಟು ಅಧಿಕಾರಕ್ಕೇರುವ ಕಾಂಗ್ರೆಸ್‌ನ ಗ್ಯಾರಂಟಿ ರಾಜಕಾರಣ ತಿರುಗುಬಾಣವಾಗುವ ಸಾಧ್ಯತೆ ಕಾಣಿಸುತ್ತಿದೆ. ಕರ್ನಾಟಕದಲ್ಲಿ ಗ್ಯಾರಂಟಿ ಬಲದಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರಕಾರದ ಆಡಳಿತದಲ್ಲಿ ಅಭಿವೃದ್ಧಿ ಕಾರ್ಯಗಳೇ ಆಗುತ್ತಿಲ್ಲ ಎಂಬ ಕೂಗು ಎದ್ದಿರುವಾಗಲೇ ಇದೇ ಸೂತ್ರ ಬಳಸಿಕೊಂಡು ಅಧಿಕಾರ ಹಿಡಿದಿರುವ ತೆಲಂಗಾಣದ ಕಾಂಗ್ರೆಸ್‌ ಸರಕಾರ ಕೂಡ ಗ್ಯಾರಂಟಿಗಳಿಂದಾಗಿ ಖಜಾನೆ ಬರಿದಾಗಿದೆ ಎಂದು ಬಹಿರಂಗವಾಗಿ ಹೇಳಿಕೊಂಡಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಈಗಾಗಲೇ ಹಿಮಾಚಲ ಪ್ರದೇಶದ ಕಾಂಗ್ರೆಸ್‌ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ.
ತೆಲಂಗಾಣದ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಸರ್ಕಾರವೂ ಸಂಕಷ್ಟಕ್ಕೆ ತುತ್ತಾಗಿದ್ದು ಸರ್ಕಾರಿ ನೌಕರರಿಗೆ ಸಂಬಳ ನೀಡಲು ದುಡ್ಡಿಲ್ಲ ಎಂದು ಹೇಳಿದೆ.

ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರಿಂದ ಈಗ ಸರ್ಕಾರದ ಬಳಿ ಸಂಬಳ ಕೊಡುವುದಕ್ಕೂ ಹಣ ಇಲ್ಲ. ನಮ್ಮ ಸರ್ಕಾರ ಸಾಲದ ಹೊರೆ ಮತ್ತು ಇತರ ಕಾರಣಗಳಿಂದ ಹಣಕಾಸಿನ ಕೊರತೆಯನ್ನು ಎದುರಿಸುತ್ತಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಆರ್‌ಬಿಐಯಿಂದ 4 ಸಾವಿರ ಕೋಟಿ ರೂ. ಕೈ ಸಾಲ ಪಡೆದಿದ್ದೇವೆ ಎಂದು ಸಿಎಂ ರೇವಂತ್‌ ರೆಡ್ಡಿ ಅಧಿಕೃತವಾಗಿ ತಿಳಿಸಿದ್ದಾರೆ.































 
 

ವಿಧಾನ ಪರಿಷತ್‌ನಲ್ಲಿ ಮಾತನಾಡಿದ ಅವರು, ಹಣ ಇಲ್ಲದ ಕಾರಣ ರಾಜ್ಯ ನೌಕರರಿಗೆ ಪ್ರತಿತಿಂಗಳ ಆರಂಭದಲ್ಲಿ ವೇತನ ನೀಡಲು ಕಷ್ಟವಾಗುತ್ತಿದೆ. ನೌಕರರ ತುಟ್ಟಿ ಭತ್ಯೆ ಬೇಡಿಕೆ ನ್ಯಾಯಯುತವಾದದ್ದೇ. ಆದರೆ ಪ್ರಸ್ತುತ ಕಠಿಣ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕಾಗಿ ಒತ್ತಾಯಿಸಬೇಡಿ. ಮುಂದೆ ಸರ್ಕಾರದ ಹಣಕಾಸು ಪರಿಸ್ಥಿತಿಯ ಸಂಪೂರ್ಣ ವಿವರವನ್ನು ನೀಡುತ್ತೇನೆ. ಸರ್ಕಾರಿ ನೌಕರರು ಮುಂದಿನ ದಿನಗಳಲ್ಲಿ ತಮ್ಮ ಕೆಲಸಗಳನ್ನು ಸೇವೆಯಂತೆ ಮಾಡಬೇಕು. ನೌಕರರು ದಯವಿಟ್ಟು ಸರ್ಕಾರದ ಜೊತೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ರೇವಂತ್‌ ರೆಡ್ಡಿ ರಾಜ್ಯದ ಕರಾಳ ಆರ್ಥಿಕ ಪರಿಸ್ಥಿತಿಯನ್ನು ತೆರೆದಿಟ್ಟಿದ್ದರು. ರಾಜ್ಯದ ಸಾಲದ ಮೊತ್ತ ಈಗ 7 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ರಾಜ್ಯದ ಮಾಸಿಕ ಆದಾಯ 18,500 ಕೋಟಿ ರೂ. ಇದೆ. ಅದರಲ್ಲಿ 6,500 ಕೋಟಿ ರೂ. ವೇತನ ಮತ್ತು ಪಿಂಚಣಿ ಪಾವತಿಗೆ ಹೋಗುತ್ತಿದೆ. 6,500 ಕೋಟಿ ರೂ. ಸಾಲ ಮತ್ತು ಬಡ್ಡಿ ಮರುಪಾವತಿಗೆ ಬೇಕು. ಉಳಿದ ಕೇವಲ 5,000 ಕೋಟಿ ರೂ. ಮೊತ್ತವನ್ನು ವಿವಿಧ ಯೋಜನೆಗಳಿಗೆ ಬಳಸಲಾಗುತ್ತಿದೆ. ಹೀಗಾಗಿ ಉಳಿದ ವೆಚ್ಚಗಳಿಗೆ ಸರ್ಕಾರದ ಬಳಿ ದುಡ್ಡೇ ಇಲ್ಲ ಎಂದಿದ್ದರು.

2023ರ ಮೇ ತಿಂಗಳಿನಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 5 ಗ್ಯಾರಂಟಿಗಳನ್ನು ಪ್ರಕಟಿಸಿ ಅಧಿಕಾರಕ್ಕೆ ಏರಿತ್ತು. ಇದರಿಂದ ಉತ್ತೇಜನಗೊಂಡ ಕಾಂಗ್ರೆಸ್‌ ತೆಲಂಗಾಣ ಚುನಾವಣೆಯಲ್ಲೂ ಗ್ಯಾರಂಟಿ ನೀಡುವ ಭರವಸೆ ನೀಡಿ ಅಧಿಕಾರಕ್ಕೆ ಏರಿತ್ತು. ಕೆಲ ತಿಂಗಳ ಹಿಂದೆ ಕಾಂಗ್ರೆಸ್‌ ಆಡಳಿತದ ಮತ್ತೊಂದು ರಾಜ್ಯವಾದ ಹಿಮಾಚಲ ಪ್ರದೇಶದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿ, ಇತಿಹಾಸದಲ್ಲೇ ಮೊದಲ ಬಾರಿಗೆ ವೇತನ, ಪಿಂಚಣಿ ಪಾವತಿ ವಿಳಂಬವಾಗಿತ್ತು. ಸಿಎಂ, ಶಾಸಕರ ವೇತನ ಪಾವತಿ ಮುಂದೂಡಲಾಗಿತ್ತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top