ಪುತ್ತೂರು: ಪುತ್ತೂರಿನ ರೋಟರಿ ಯುವ ಸಂಸ್ಥೆಯು ತನ್ನ ದಶವಾರ್ಷಿಕದ ಅಂಗವಾಗಿ ಪುತ್ತೂರಿನ ರೈಲ್ವೇ ನಿಲ್ದಾಣಕ್ಕೆ ಸುಮಾರು 50 ಸಾವಿರ ರೂ. ವೆಚ್ಚದ ಎದೆಹಾಲು ಉಣಿಸುವ ಹಾಗೂ ಶಿಶುಪಾಲನಾ ಕೇಂದ್ರವೊಂದನ್ನು ಕೊಡುಗೆಯಾಗಿ ನೀಡಲಿದೆ. ಮಾ.19 ರಂದು ರೈಲ್ವೇ ನಿಲ್ದಾಣದ ಮಹಿಳೆಯರ ಕೊಠಡಿಯಲ್ಲಿ ಈ ಕೇಂದ್ರದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ರೋಟರಿ ಯುವ ಸಂಸ್ಥೆಯ ಅಧ್ಯಕ್ಷೆ ಅಶ್ವಿನಿ ಮುಳಿಯ ತಿಳಿಸಿದ್ದಾರೆ.
ಅವರು ಸೋಮವಾರ ಪುತ್ತೂರು ಪ್ರೆಸ್‌ಕ್ಲಬ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೋಟರಿ ಜಿಲ್ಲೆ 3081 ರ ಜಿಲ್ಲಾ ಗವರ್ನರ್ ವಿಕ್ರಮ್ ದತ್ತಾ ಅವರು ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾ ಅಸಿಸ್ಟಂಟ್ ಗವರ್ನರ್ ಡಾ. ಹರ್ಷಕುಮಾರ್ ರೈ ಅವರ ಪ್ರಾಯೋಜಕತ್ವದಲ್ಲಿ ಶ್ರೀ ಮಹಾಮಾಯಿ ದೇವಸ್ಥಾನಕ್ಕೆ ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡಲಾಗುವುದು. ಜೊತೆಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿನ ಪ್ರಾಜೆಕ್ಟ್ ವೀಕ್ಷಣೆ ನಡೆಸಲಾಗುವುದು. ಬಳಿಕ ನವೀಕೃತಗೊಂಡಿರುವ ಪುತ್ತೂರಿನ ಮಹಿಳಾ ಸಾಂತ್ವನ ಕೇಂದ್ರಕ್ಕೆ ಅಗತ್ಯ ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಲಾಗುವುದು.
ಸಂಜೆ 7 ಗಂಟೆಗೆ ಪುತ್ತೂರು ಎಪಿಎಂಸಿ ರಸ್ತೆಯಲ್ಲಿರುವ ದ ಪುತ್ತೂರು ಗಾರ್ಡನ್‌ನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಅಸಿಸ್ಟಂಟ್ ಗವರ್ನರ್ ಡಾ. ಹರ್ಷಕುಮಾರ್ ರೈ ಮತ್ತು ಲೆಫ್ಟಿನೆಂಟ್ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ಯುವ ಸಂಸ್ಥೆಯ ಕಾರ್ಯದರ್ಶಿ ವಚನಾ ಜಯರಾಂ, ಪೂರ್ವಾಧ್ಯಕ್ಷ ಪಶುಪತಿ ಶರ್ಮ, ನಿಯೋಜಿತ ಅಧ್ಯಕ್ಷ ಕುಸುಮರಾಜ್ ಉಪಸ್ಥಿತರಿದ್ದರು.