9 ತಿಂಗಳ ಅಂತರಿಕ್ಷ ವಾಸಕ್ಕೆ ಕೊನೆಗೂ ಮುಕ್ತಿ ಸನ್ನಿಹಿತ
ನ್ಯೂಯಾರ್ಕ್ : ಒಂಬತ್ತು ತಿಂಗಳಿಂದ ಅಂತರಿಕ್ಷದಲ್ಲಿ ಸಿಕ್ಕಿಬಿದ್ದಿರುವ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲ್ಲಿಯಮ್ಸ್ ಅವರನ್ನು ಭೂಮಿಗೆ ಕರೆತರಲು ಕ್ಷಣಗಣನೆ ಶುರುವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಂಗಳವಾರ ಸಂಜೆಗಾಗುವಾಗ ಸುನೀತಾ ವಿಲ್ಲಿಯಮ್ಸ್ ಇರುವ ಗಗನನೌಕೆ ಭೂಮಿ ಸ್ಪರ್ಶ ಮಾಡಲಿದೆ. ಆ ಮೂಲಕ ಸುದೀರ್ಘ 9 ತಿಂಗಳ ಅಂತರಿಕ್ಷ ವಾಸ ಅಂತ್ಯಗೊಳ್ಳಲಿದೆ.
ಆರಂಭದಲ್ಲಿ ಬುಧವಾರ ಅಥವಾ ಗುರುವಾರ ಇಬ್ಬರು ಗಗನಯಾತ್ರಿಗಳನ್ನು ವಾಪಸ್ ಕರೆತರಲು ಯೋಜನೆ ರಚಿಸಲಾಗಿತ್ತು. ಆದರೆ ಈ ಸಲ ಯೋಜನೆಗಳೆಲ್ಲ ಸುಸೂತ್ರವಾಗಿ ನಡೆಯುತ್ತಿರುವುದರಿಂದ ಮಂಗಳವಾರವೇ ಭೂಮಿಗೆ ಆಗಮಿಸುವ ಸಾಧ್ಯತೆಯಿದೆ. ಈ ಕ್ಷಣವನ್ನು ನಾವು ಕಾತರದಿಂದ ನಿರೀಕ್ಷಿಸುತ್ತಿದ್ದೇವೆ ಎಂದು ನಾಸಾ ಹೇಳಿದೆ.
ಸುನೀತಾ ವಿಲ್ಲಿಯಮ್ಸ್ ಮತ್ತು ಸಹ ಗಗನಯಾತ್ರಿ ಬುಚ್ ವಿಲ್ಮೋರ್ 9 ತಿಂಗಳಿಂದ ಅಂತರಿಕ್ಷ ನಿಲ್ದಾಣದಲ್ಲಿ ಬಾಕಿಯಾಗಿದ್ದಾರೆ. ಅವರನ್ನು ಕರೆತರಲು ಇಬ್ಬರು ಅಮೆರಿಕ ಮತ್ತು ರಷ್ಯಾದ ಗಗನಯಾತ್ರಿಗಳ ತಂಡ ತೆರಳಿದೆ. ಸ್ಪೇಸ್ ಎಕ್ಸ್ ಡ್ರ್ಯಾಗನ್ ಕ್ರಾಫ್ಟ್ ಗಗನನೌಕೆ ಅಂತರಿಕ್ಷ ನಿಲ್ದಾಣ ತಲುಪಿ ಸುನೀತಾ ವಿಲ್ಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ಬಳಿಗೆ ಹೋಗಿದೆ. ಈ ಸಂದರ್ಭ ಗಗನಯಾತ್ರಿಗಳು ಆನಂದದಿಂದ ಪರಸ್ಪರ ಅಪ್ಪಿಕೊಂಡ ವೀಡಿಯೊ ಭಾರಿ ವೈರಲ್ ಆಗಿದೆ.
ಬೋಯಿಂಗ್ ಸ್ಟಾರ್‌ಲೈನರ್ ಗಗನನೌಕೆಯಲ್ಲಿ 7 ದಿನಗಳ ಅಂತರಿಕ್ಷ ಯಾತ್ರೆ ಕೈಗೊಂಡಿದ್ದ ಸುನೀತಾ ವಿಲ್ಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಈ ಗಗನನೌಕೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಬಳಿಕ ಅಂತರಿಕ್ಷ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರನ್ನು ಕರೆತರುವ ಎರಡು ಪ್ರಯತ್ನಗಳು ವಿಫಲಗೊಂಡ ಬಳಿಕ ಆತಂಕದ ಕ್ಷಣಗಳು ಎದುರಾಗಿದ್ದವು. ಆದರೆ ನಾಸಾ ಎಡೆಬಿಡದೆ ಪ್ರಯತ್ನ ಮಾಡಿ ಕೊನೆಗೂ ವಾಪಾಸು ಕರೆತರುವ ಮಿಷನ್ ಪ್ರಾರಂಭಿಸಿದೆ.