ಕಲಿಯಲು ಬಂದಿದ್ದ ಸ್ನೇಹಿತನ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದ ಪಾಪಿ
ಮಂಗಳೂರು: ಕಾರ್ಕಳ ತಾಲೂಕಿನ ಇನ್ನಾದಲ್ಲಿ ಎರಡು ವರ್ಷದ ಹಿಂದೆ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಆಕೆ ಗರ್ಭಿಣಿಯಾಗುವಂತೆ ಮಾಡಿದ್ದ ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಪೋಕ್ಸೊ ವಿಶೇಷ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದೆ. ಮೂಲ್ಕಿ ತಾಲೂಕು ಏಳಿಂಜೆಯ ರವಿ (35) ಎಂಬಾತ ಶಿಕ್ಷೆಗೊಳಗಾದ ಅಪರಾಧಿ.
ಅಪರಾಧಿ ರವಿ 2023ರ ಜೂನ್‌ನಿಂದ ಡಿಸೆಂಬರ್‌ವರೆಗೆ ಇನ್ನಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈ ಸಂದರ್ಭದಲ್ಲಿ ಈತನ ಸ್ನೇಹಿತ ತನ್ನ 17ರ ಹರೆಯದ ಪಿಯುಸಿ ಕಲಿಯುತ್ತಿದ್ದ ಮಗಳನ್ನು ಕಾಲೇಜಿಗೆ ಹೋಗಲು ಅನುಕೂಲ ಆಗುತ್ತದೆ ಎಂದು ಈತನ ಮನೆಯಲ್ಲಿ ಬಿಟ್ಟಿದ್ದರು. ರವಿ ಆಕೆಯನ್ನು ಪುಸಲಾಯಿಸಿ 2023ರ ನವಂಬರ್‌ನಲ್ಲಿ ಇನ್ನಾ ಸಮೀಪದ ಗುಡ್ಡಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಬಳಿಕ ಆತ ಏಳಿಂಜೆಗೆ ಮನೆ ಬದಲಾಯಿಸಿದ್ದು, ಆಗಲೂ ಬಾಲಕಿಯನ್ನು ವಿವಿಧೆಡೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಪರಿಣಾಮವಾಗಿ ಬಾಲಕಿ ಗರ್ಭ ಧರಿಸಿದ್ದು, ಆಗ ಲೈಂಗಿಕ ಶೋಷಣೆಯ ಕೃತ್ಯ ಬಯಲಿಗೆ ಬಂದಿತ್ತು. ರವಿಯ ವಿರುದ್ಧ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕೇಸ್ ದಾಖಲಿಸಲಾಗಿತ್ತು. ನ್ಯಾಯಾಲಯ 20 ವರ್ಷ ಕಠಿಣ ಜೈಲು ಶಿಕ್ಷೆಯ ಜೊತೆಗೆ 50 ಸಾವಿರ ರೂ. ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ಸಂತ್ರಸ್ತ ಬಾಲಕಿಗೆ ಪರಿಹಾರ ರೂಪದಲ್ಲಿ ಪಾವತಿಸಲು ಆದೇಶಿಸಿದೆ.