ರಾತ್ರಿ ಅಜ್ಞಾತ ವ್ಯಕ್ತಿಗಳ ಗುಂಡಿಗೆ ಬಲಿಯಾದ ಉಗ್ರ ಸಂಘಟನೆಯ ಕಮಾಂಡರ್
ಇಸ್ಲಾಮಾಬಾದ್ : ಪಾಕಿಸ್ಥಾನದ ಉಗ್ರ ಸಂಘಟನೆ ಲಷ್ಕರ್ ಇ ತಯ್ಯಬದ ಕಮಾಂಡರ್, ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದ ಉಗ್ರನೊಬ್ಬನನ್ನು ಅಜ್ಞಾತ ವ್ಯಕ್ತಿಗಳು ನಿನ್ನೆ ರಾತ್ರಿ ಸಾಯಿಸಿದ್ದಾರೆ. ಕೊಲೆಯಾಗಿರುವ ಅಬ್ದುಲ್ ಖತಲ್ ಜಮ್ಮು-ಕಾಶ್ಮೀರದಲ್ಲಿ ನಡೆದ ಹಲವು ಉಗ್ರ ದಾಳಿಗಳ ರೂವಾರಿಯಾಗಿದ್ದ. ಭಾರತದ ಪಾಲಿಗೆ ಅವನು ತಲೆನೋವಾಗಿದ್ದ. ಶನಿವಾರ ರಾತ್ರಿ ಅವನನ್ನು ಅಜ್ಞಾತ ವ್ಯಕ್ತಿಗಳು ಗುಂಡಿಕ್ಕಿ ಸಾಯಿಸಿದ್ದಾರೆ ಎಂದು ವರದಿಯಾಗಿದೆ.
ಲಷ್ಕರ್‌ನ ಸ್ಥಾಪಕ ಹಾಗೂ ಮುಂಬಯಿ ಮೇಲೆ ನಡೆದ ಭಯೋತ್ಪಾದಕ ದಾಳಿಯ ಸೂತ್ರಧಾರನಾಗಿದ್ದ ಹಾಫಿದ್ ಸಯೀದ್‌ನ ಬಲಗೈ ಬಂಟನಾಗಿದ್ದ ಅಬ್ದುಲ್ ಖತಲ್ ಕಳೆದ ವರ್ಷ ಜೂನ್ 9ರಂದು ಜಮ್ಮು-ಕಾಶ್ಮೀರದ ಶಿವಖೇರಿ ದೇವಸ್ಥಾನಕ್ಕೆ ಹೋಗಿ ಹಿಂದಿರುಗುತ್ತಿದ್ದ ಭಕ್ತರಿದ್ದ ಬಸ್‌ನ ಮೇಲೆ ನಡೆದ ಉಗ್ರರ ದಾಳೀಯ ನೇತೃತ್ವ ವಹಿಸಿದ್ದ.
ಈ ದಾಳಿಯ ಬಳಿಕ ಅಬ್ದುಲ್ ಖತಲ್‌ನನ್ನು ಹಾಫೀದ್ ಸಯೀದ್ ಲಷ್ಕರ್‌ನ ಚೀಫ್ ಆಪರೇಷನಲ್ ಕಮಾಂಡರ್ ಹುದ್ದೆಗೆ ನೇಮಿಸಿದ್ದ. 2023ರಲ್ಲಿ ರಾಜೋರಿಯಲ್ಲಿ ನಡೆದ ಭಯೋತ್ಪಾದಕ ದಾಳೀಯಲ್ಲೂ ಖತಲ್ ಭಾಗಿಯಾಗಿದ್ದ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅವನನ್ನು ಬೇಟೆಯಾಡಲು ಕಾಯುತ್ತಿತ್ತು. ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಹಾಫಿಜ್ ಅವನನ್ನು ನಿಯೋಜಿಸಿದ್ದ.
ಇನ್ನೊಂದು ಘಟನೆಯಲ್ಲಿ ಶನಿವಾರ ಪೇಷಾವರದ ಮಸೀದಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡಿದ್ದ ಲಷ್ಕರ್‌ನ ಸಹ ಸ್ಥಾಪಕ ಧಾರ್ಮಿಕ ಪಂಡಿತ ಮುಫ್ತಿ ಮುನೀರ್ ಶಕೀರ್ ಎಂಬಾತನೂ ಸತ್ತಿದ್ದಾನೆ ಎಂದು ವರದಿಯಾಗಿದೆ.