ಪ್ರಭಾವಿ ನಾಯಕರೊಬ್ಬರ ಜರ್ಮನಿ ಟೂರ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ ತನಿಖಾಧಿಕಾರಿಗಳು
ಬೆಂಗಳೂರು: ಕನ್ನಡ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ತನಿಖೆ ತೀವ್ರಗೊಂಡಿರುವಂತೆ ಸರಕಾರ ಆಕೆಯ ಮಲತಂದೆ ಡಿಜಿಪಿ ದರ್ಜೆಯ ಐಪಿಎಸ್ ಅಧಿಕಾರಿ ಡಾ.ರಾಮಚಂದ್ರ ರಾವ್ ಅವರನ್ನು ಕಡ್ಡಾಯ ರಜೆಯಲ್ಲಿ ಕಳಿಸಿದೆ. ಡಾ.ರಾಮಚಂದ್ರ ರಾವ್ ಪ್ರಸ್ತುತ ಪೊಲೀಸ್ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ರನ್ಯಾ ರಾವ್ ಕಳೆದ ಮಾ.3ರಂದು ದುಬೈಯಿಂದ 12.56 ಕೋಟಿ ರೂ. ಮೌಲ್ಯದ 14.2 ಕೆಜಿ ಚಿನ್ನವನ್ನು ಕಳ್ಳ ಮಾರ್ಗದಿಂದ ತಂದು ಸಿಕ್ಕಿಬಿದ್ದಿದ್ದಾಳೆ. ವಿಮಾನ ನಿಲ್ದಾಣದ ಪ್ರೊಟೊಕಾಲ್ ಅಧಿಕಾರಿ ತಾನು ಡಿಜಿಪಿ ರಾಮಚಂದ್ರ ರಾವ್ ನಿರ್ದೇಶನ ಪ್ರಕಾರ ರನ್ಯಾ ರಾವ್‌ಗೆ ಪ್ರೊಟೊಕಾಲ್ ರಕ್ಷಣೆ ಕೊಡುತ್ತಿದ್ದೆ ಎಂದು ಹೇಳಿರುವ ಹಿನ್ನೆಲೆಯಲ್ಲಿ ಅವರನ್ನು ಸರಕಾರ ಕಡ್ಡಾಯ ರಜೆ ಮೇಲೆ ಕಳುಹಿಸಿದೆ. ರನ್ಯಾ ರಾವ್ ಒಂದು ವರ್ಷದಲ್ಲಿ ಕನಿಷ್ಠ 27 ಬಾರಿ ದುಬೈಗೆ ಹೋಗಿಬಂದಿದ್ದಾಳೆ ಎಂಬ ತನಿಖೆಯಿಂದ ತಿಳಿದುಬಂದಿದೆ.
ಗೋಲ್ಡ್ ಸ್ಮಗ್ಲಿಂಗ್ ಹಿಂದೆ ವ್ಯವಸ್ಥಿತವಾದ ಜಾಲವಿದೆ. ವಿಮಾನ ನಿಲ್ದಾಣದಲ್ಲಿ ತಪಾಸಣೆಯನ್ನು ತಪ್ಪಿಸಿಕೊಳ್ಳಲು ರಾಜ್ಯದ ಪ್ರೊಟೊಕಾಲ್ ವ್ಯವಸ್ಥೆಯನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ. ಹವಾಲ ಮೂಲಕ ಭಾರತದಿಂದ ದುಬೈಗೆ ಹಣ ರವಾನಿಸಲಾಗಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಡಿಆರ್‌ಐ ನ್ಯಾಯಾಲಯಕ್ಕೆ ತಿಳಿಸಿದೆ. ಈಗ ಸಿಬಿಐ ಕೂಡ ಈ ಪ್ರಕರಣದ ತನಿಖೆ ಮಾಡುತ್ತಿದ್ದು, ತನಿಖೆ ಪ್ರಗತಿಯಾದಂತೆ ಹೊಸ ಹೊಸ ವಿಚಾರಗಳು ಬಯಲಿಗೆ ಬರುತ್ತಿವೆ.
ರನ್ಯಾ ರಾವ್ ಸೆರೆಯಾದಾಗ ರಾಮಚಂದ್ರ ರಾವ್ ತನಗೂ ಅವಳಿಗೂ ಯಾವುದೇ ಸಂಬಂಧ ಈಗ ಇಲ್ಲ. ಮದುವೆ ನಂತರ ನಾವು ಅವಳನ್ನು ಭೇಟಿಯಾಗಿಲ್ಲ, ನಮ್ಮ ಎರಡು ಕುಟುಂಬಗಳ ನಡುವೆ ಸಂಪರ್ಕ ಕಡಿದು ಹೋಗಿದೆ ಎಂದು ಹೇಳಿದ್ದರು. ಆದರೆ ವಿಮಾನ ನಿಲ್ದಾಣದಿಂದ ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದ ಹೆಡ್‌ಕಾನ್‌ಸ್ಟೆಬಲ್ ಪ್ರೊಟೊಕಾಲ್ ರಕ್ಷಣೆ ಕೊಡಲು ತನಗೆ ಡಿಜಪಿ ನೇರವಾಗಿ ಆದೇಶ ನೀಡುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರ ನೇತೃತ್ವದಲ್ಲಿ ಈ ಪ್ರಕರಣದಲ್ಲಿ ರಾಮಚಂದ್ರ ರಾವ್ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ. ಈ ನಡುವೆ ರಾಜ್ಯ ಸರಕಾರ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಡಿಜಿಪಿ ಶಾಮೀಲಾಗಿರುವ ಕುರಿತು ತನಿಖೆ ನಡೆಸಲು ಮಾ.10ರಂದು ಸಿಐಡಿ ತನಿಖೆಗೆ ಆದೇಶಿಸಿತ್ತು. ಆದರೆ ಮರುದಿನವೇ ಈ ಆದೇಶವನ್ನು ವಾಪಸು ಪಡೆದುಕೊಂಡಿರುವುದು ಅನುಮಾನಗಳಿಗೆ ಕಾರಣವಾಗಿದೆ.
ನಾಯಕನ ಜರ್ಮನಿ ಟೂರ್ ಮೇಲೆ ಅನುಮಾನ
ರಾಜ್ಯದ ಪ್ರಭಾವಿ ನಾಯಕರೊಬ್ಬರ ವಿದೇಶ ಪ್ರವಾಸ ಈಗ ಚಿನ್ನ ಕಳ್ಳ ಸಾಗಾಟ ಪ್ರಕರಣದ ಜೊತೆಗೆ ತಳಕು ಹಾಕಿಕೊಂಡಿದೆ. ಅವರ ಜರ್ಮನಿ ಟೂರ್ ಬಗ್ಗೆ ಈಗ ಭಾರಿ ಅನುಮಾನ ಎದ್ದಿದೆ. ತನ್ನ ಬಗ್ಗೆ ಅನುಮಾನ ಬರುತ್ತಿದ್ದಂತೆ ನನಗೆ ಯಾವುದೇ ಸಂಬಂಧ ಇಲ್ಲ. ನಾನು ವೈಯಕ್ತಿಕ ಪ್ರವಾಸಕ್ಕೆ ಜರ್ಮನಿಗೆ ತೆರಳಿದ್ದೇನೆ ಎಂದು ಆಪ್ತರ ಜೊತೆ ಆ ನಾಯಕ ಹೇಳಿಕೊಂಡಿದ್ದಾರೆ. ಜರ್ಮನಿ ಪ್ರವಾಸಕ್ಕೂ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ಗೂ ಯಾವುದೇ ಸಂಬಂಧ ಇಲ್ಲ. ನಾನು ಸ್ನೇಹಿತರ ಜೊತೆ ಜರ್ಮನಿಗೆ ಹೋಗಿದ್ದೇನೆ. ಸಿಬಿಐ ಟೂರ್ ಟ್ರ್ಯಾಕ್ ಮಾಡಿದರೂ ತನಗೆ ಸಂಬಂಧ ಇಲ್ಲ ಎಂದು ಹೇಳಿಕೊಂಡಿದ್ದಾರೆ.
ಈ ನಡುವೆ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಆಪ್ತನೊಬ್ಬನನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಚಿಕ್ಕಮಗಳೂರು ನಗರದ ಹೊಸಮನೆ ಬಡಾವಣೆಯ ಕಾರು ಚಾಲಕ ದೀಪಕ್‍ನನ್ನು ಅಧಿಕಾರಿಗಳು ಮೂರು ದಿನಗಳ ಹಿಂದೆ ವಶಕ್ಕೆ ವಿಚಾರಣೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ದೀಪಕ್ ಪಾತ್ರ ಇದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಎಲ್ಲ ಆಯಾಮಗಳಲ್ಲೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.