ಖುದ್ದು ಹಾಜರಾತಿ, ಸಮನ್ಸ್‌ಗೆ ಹೈಕೋರ್ಟಿನಿಂದ ತಡೆ
ಬೆಂಗಳೂರು: ಪೋಕ್ಸೊ ಪ್ರಕರಣದ ಸಂಬಂಧ ಮಾರ್ಚ್ 15ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂಪ್ಪರಿಗೆ 1ನೇ ತ್ವರಿತಗತಿ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್‌ಗೆ ಹೈಕೋರ್ಟ್ ತಡೆ ನೀಡಿದೆ. ಯಡಿಯೂರಪ್ಪ ಖುದ್ದು ಹಾಜರಾತಿಗೂ ವಿನಾಯಿತಿ ನೀಡಿದೆ. ಈ ಮೂಲಕ ಪ್ರಕರಣದಲ್ಲಿ ಬಿ.ಎಸ್ ಯಡಿಯೂಪ್ಪ ಅವರಿಗೆ ರಿಲೀಫ್ ಸಿಕ್ಕಿದೆ.
2024ರ ಫೆಬ್ರವರಿ 2ರಂದು ನಡೆದಿದೆ ಎನ್ನಲಾದ ಘಟನೆ ಕುರಿತು 1 ತಿಂಗಳು 12 ದಿನ ತಡವಾಗಿ ಪೋಕ್ಸೊ ಕೇಸ್ ದಾಖಲಿಸಲಾಗಿದೆ. ಘಟನೆ ನಡೆದಿದ್ದರೆ ಯಾರೂ ಇಷ್ಟು ತಡವಾಗಿ ದೂರು ದಾಖಲಿಸುತ್ತಿರಲಿಲ್ಲ. ಸಮನ್ಸ್ ರದ್ದುಪಡಿಸಿ ಹೊಸದಾಗಿ ಪರಿಶೀಲನೆಗೆ ಹಿಂದೆ ಆದೇಶಿಸಲಾಗಿತ್ತು. ಈಗ ವಿಶೇಷ ಕೋರ್ಟ್ ಕಾಗ್ನಿಜೆನ್ಸ್ ಪಡೆದು ಸಮನ್ಸ್ ಜಾರಿಗೊಳಿಸಿದೆ ಎಂದು ಬಿ.ಎಸ್ ಯಡಿಯೂರಪ್ಪ ಪರ ವಕೀಲರು ವಾದಿಸಿದರು.
ಯಡಿಯೂರಪ್ಪ ವಕೀಲರ ಮನವಿಗೆ ಅಡ್ವೊಕೇಟ್ ಜನರಲ್ ಆಕ್ಷೇಪಿಸಿದರು. ಹೈಕೋರ್ಟ್ ಸೂಚನೆಯಂತೆ ವಿಶೇಷ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಹೀಗಾಗಿ ಸಮನ್ಸ್‌ಗೆ ತಡೆ ನೀಡದಂತೆ ಮನವಿ ಮಾಡಿದರು.
ವಾದ-ಪ್ರತಿವಾದ ಆಲಿಸಿದ ನ್ಯಾ.ಪ್ರದೀಪ್ ಸಿಂಗ್ ಯೆರೂರ್ ಅವರ ಪೀಠ ಯಡಿಯೂರಪ್ಪನವರ ಅರ್ಜಿಯ ವಿಚಾರಣೆ ಅಗತ್ಯವಿದೆ ಎಂದು ಹೇಳಿ ಸಮನ್ಸ್ ಆದೇಶಕ್ಕೆ ತಡೆ ನೀಡಿದೆ. ಹಾಗೇ, ಖುದ್ದು ಹಾಜರಾತಿಯಿಂದಲೂ ಬಿಎಸ್ ಯಡಿಯೂರಪ್ಪ ಅವರಿಗೆ ವಿನಾಯಿತಿ ನೀಡಿದೆ.
ಯಡಿಯೂರಪ್ಪ ಅವರು 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ 2024ರ ಮಾರ್ಚ್ನಲ್ಲಿ ಕೇಳಿಬಂದಿತ್ತು. ಸಂತ್ರಸ್ತೆಯ ತಾಯಿ ಈ ಆರೋಪ ಮಾಡಿದ್ದರು. ಯಡಿಯೂರಪ್ಪ ವಿರುದ್ಧ ಪೋಕ್ಸೊ ಅಡಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.