500 ಪ್ರಯಣಿಕರಿದ್ದ ಪ್ಯಾಸೆಂಜರ್ ರೈಲನ್ನು ಅಪಹರಿಸಿದ್ದ ಬಲೂಚಿಸ್ಥಾನ ಬಂಡುಕೋರರು
ಇಸ್ಲಾಮಾಬಾದ್ : ಬಲೂಚಿಸ್ಥಾನದಲ್ಲಿ ಜಾಫರ್ ಎಕ್ಸ್‌ಪ್ರೆಸ್ ಪ್ಯಾಸೆಂಜರ್ ರೈಲು ಅಪಹರಿಸಿ ಪ್ರಯಾಣಿಕರನ್ನು ಒತ್ತೆಸೆರೆಯಲ್ಲಿಟ್ಟಿದ್ದ ಎಲ್ಲ 33 ಬಂಡುಕೋರರನ್ನು ಸಾಯಿಸಿ, ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಪಾಕಿಸ್ಥಾನದ ಸೇನೆ ಹೇಳಿಕೊಂಡಿದೆ.
ಮಂಗಳವಾರ ಕ್ವೆಟ್ಟಾದಿಂದ ಪೇಷಾವರಕ್ಕೆ ಬರುತ್ತಿದ್ದ ರೈಲನ್ನು ಬಲೂಚಿಸ್ಥಾನದ ಬಲೂನ್ ಎಂಬಲ್ಲಿ ಹಳಿಯನ್ನು ಸ್ಫೋಟಿಸಿ ಅಪಹರಿಸಿದ್ದ ಬಂಡುಕೋರರು ಪ್ರಯಾಣಿಕರನ್ನು ಒತ್ತೆಸೆರೆಯಲ್ಲಿಟ್ಟು, ಸೆರೆಮನೆಗಳಲ್ಲಿರುವ ಬಲೂಚಿಸ್ಥಾನದ ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸಿ ಬಲೂಚಿಸ್ಥಾನವನ್ನು ಸ್ವತಂತ್ರ ದೇಶವಾಗಿ ಘೋಷಿಸಬೇಕೆಂಬ ಬೇಡಿಕೆ ಇಟ್ಟಿದ್ದರು.
ಾಪಹರಿಸಿದ ರೈಲಿನಲ್ಲಿ ಸುಮಾರು 500 ಪ್ರಯಾಣಿಕರು ಮತ್ತು ಭದ್ರತಾ ಸಿಬ್ಬಂದಿಯಿದ್ದರು. ಪಾಕಿಸ್ಥಾನದ ಸೇನೆ ಪ್ರತಿದಾಳಿ ಶುರುಮಾಡಿದ ಹಿನ್ನೆಲೆಯಲ್ಲಿ 60 ಪ್ರಯಾಣಿಕರನ್ನು ಸಾಯಿಸಿದ್ದೇವೆ ಎಂದು ಬಂಡುಕೋರರು ಹೇಳಿಕೊಂಡಿದ್ದರು. ಆದರೆ ನಿನ್ನೆ ತಡರಾತ್ರಿ ಕಾರ್ಯಾಚರಣೆ ಮುಗಿಸಿದ್ದೇವೆ. ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಪಾರು ಮಾಡಲಾಗಿದೆ. ಸ್ಥಳದಲ್ಲಿದ್ದ 33 ಬಂಡುಕೋರರನ್ನು ಕೊಂದಿದ್ದೇವೆ ಎಂದು ಪಾಕಿಸ್ಥಾನದ ಇಂಟರ್ ಸರ್ವಿಸ್ ಪಬ್ಲಿಕ್ ಸರ್ವಿಸ್‌ನ ಮಹಾನಿರ್ದೇಶಕ ಲೆ.ಜ.ಅಹ್ಮದ್ ಷರೀಫ್ ಚೌಧರಿ ಹೇಳಿದ್ದಾರೆ.
ರೈಲು ಅಪಹರಿಸಿದ ಬಲೂಚಿಸ್ಥಾನ್ ಲಿಬರೇಶನ್ ಆರ್ಮಿಯ (ಬಿಎಲ್‌ಎ) ಬಂಡುಕೋರರು 21 ಪ್ರಯಾಣಿಕರನ್ನು ಮತ್ತು ನಾಲ್ವರು ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದಾರೆ. ಉಳಿದವರನ್ನು ರಕ್ಷಿಸಿದ್ದೇವೆ ಎಂದು ಚೌಧರಿ ಹೇಳಿದ್ದಾರೆ.
ರೈಲು ಅಪಹರಿಸಿದ್ದ ಬಂಡುಕೋರರು ಅದರಲ್ಲಿದ್ದ ಮಹಿಳೆಯರು ಮತ್ತು ಮಕ್ಕಳನ್ನು ಗುಂಪು ಗುಂಪಾಗಿ ಗುಡ್ಡ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮಾನವ ಗುರಾಣಿಯಾಗಿ ಬಳಸಿಕೊಂಡ ಕಾರಣ ಸುದೀರ್ಘ ಕಾರ್ಯಾಚರಣೆ ನಡೆಸಬೇಕಾಯಿತು. ಬುಧವಾರ ತಡರಾತ್ರಿಗಾಗುವಾಗ ಕೊನೆಯ ಹಂತದ ಕಾರ್ಯಾಚರಣೆ ನಡೆಸಿ ಎಲ್ಲ ಬಂಡುಕೋರರನ್ನು ಸಾಯಿಸಲಾಗಿದೆ. ಒಟ್ಟಾರೆಯಾಗಿ 300ರಷ್ಟು ಪ್ರಯಾಣಿಕರನ್ನು ಒತ್ತೆಸೆರೆಯಿಂದ ಪಾರು ಮಾಡಲಾಗಿದೆ ಎಂದು ಪಾಕ್ ಸೇನೆ ಹೇಳಿಕೊಂಡಿದೆ.
ಕ್ವೆಟ್ಟಾದಿಂದ ಸುಮಾರು 160 ದೂರದಲ್ಲಿರುವಾಗ 500 ಪ್ರಯಾಣಿಕರಿದ್ದ 9 ಬೋಗಿಯ ಒಂದಿಡೀ ರೈಲನ್ನೇ ಬಂಡುಕೋರರ ಅಪಹರಿಸಿ ಪಾಕಿಸ್ಥಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಿಲ್ಲದ ಮುಜುಗರವುಂಟುಮಾಡಿದ್ದರು. ಭಯೋತ್ಪಾದನೆಯಲ್ಲಿ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿರುವ ಪಾಕಿಸ್ಥಾನದಲ್ಲಿ ಈಗ ಬಲೂಚಿಸ್ಥಾನ್ ಪ್ರತ್ಯೇಕತಾ ಹೋರಾಟ ತೀವ್ರಗೊಂಡಿದೆ. ಬಂಡುಕೋರರು ಸೇನೆಯ ಮೇಲೆ ಆಗಾಗ ದಾಳಿ ಮಾಡುತ್ತಿದ್ದರೂ ರೈಲನ್ನು ಅಪಹರಿಸಿದ್ದು ಇದೇ ಮೊದಲು.