ಶುಕ್ರವಾರ ಹೋಳಿ ಹಬ್ಬ ಬಂದ ಕಾರಣ ಬಿಗುವಿನ ವಾತಾವರಣ
ಲಖನೌ: ಈ ವರ್ಷ ಹೋಳಿ ಹಬ್ಬ ಶುಕ್ರವಾರ ಬಂದಿರುವುದರಿಂದ ದೇಶದ ಕೆಲವೆಡೆ ಬಿಗುವಿನ ಪರಿಸ್ಥಿತಿ ಉಂಟಾಗಿದೆ. ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಪೊಲೀಸ್ ಉನ್ನತಾಧಿಕಾರಿಯೊಬ್ಬರು ಹೋಳಿ ಹಬ್ಬ ವರ್ಷಕ್ಕೊಮ್ಮೆ ಮಾತ್ರ ಬರುತ್ತದೆ, ಶುಕ್ರವಾರ ವರ್ಷದಲ್ಲಿ 52 ಸಲ ಬರುತ್ತದೆ, ಹೋಳಿಯ ಬಣ್ಣ ಇಷ್ಟವಾಗದವರು ಆ ದಿನ ಮನೆಯಲ್ಲೇ ನಮಾಜ್ ಮಾಡಿ ಎಂದು ಹೇಳಿದ ಬಳಿಕ ವಿವಾದ ಸೃಷ್ಟಿಯಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ಪೊಲೀಸ್ ಅಧಿಕಾರಿಯನ್ನು ಬೆಂಬಲಿಸಿದ್ದು, ಹೋಳಿ ಹಬ್ಬದ ದಿನ ಸಮಸ್ಯೆಯಾಗುವವರು ಮನೆಯೊಳಗೆ ಇರಿ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಭಾವ್ಯ ಅನಾಹುತ ತಪ್ಪಿಸುವ ಉದ್ದೇಶದಿಂದ ಉತ್ತರ ಪ್ರದೇಶಾದ್ಯಂತ ಮಸೀದಿಗಳಿಗೆ ಟಾರ್ಪಾಲು ಹೊದಿಕೆಯನ್ನು ಹೊದಿಸಿ ಮರೆಮಾಚಲಾಗಿದೆ.
ಪ್ರತಿವರ್ಷ ಉತ್ತರ ಪ್ರದೇಶ ಸಹಿತ ಕೆಲವಡೆ ಹೋಳಿಯ ಬಣ್ಣ ರಾಚದಂತೆ ಮಸೀದಿಗಳಿಗೆ ಟಾರ್ಪಾಲು ಹೊದಿಸುತ್ತಾರೆ. ಆದರೆ ಈ ವರ್ಷ ಬಿಗುವಿನ ವಾತಾವರಣ ಇರುವ ಹಿನ್ನೆಲೆಯಲ್ಲಿ ಎಲ್ಲೆಡೆ ಮಸೀದಿಗಳೀಗೆ ಟಾರ್ಪಾಲು ಹೊದಿಸಿರುವುದು ಕಂಡುಬರುತ್ತಿದೆ. ಯಾವುದೇ ಅಹಿತಕ ಘಟನೆಗಳು ನಡೆಯದಂತೆ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಹೋಳಿ ಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗುವ ಐತಿಹಾಸಿಕ ‘ಲಾಟ್ ಸಾಹೇಬ್’ ಮೆರವಣಿಗೆ ಸಾಗುವ ಮಾರ್ಗದಲ್ಲಿರುವ ಮಸೀದಿಗಳನ್ನು ಟಾರ್ಪಾಲಿನಿಂದ ಮುಚ್ಚಲು ನಗರ ಪಾಲಿಕೆ ನಿರ್ಧರಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪಾಲಿಕೆ ಆಯುಕ್ತ ವಿಪಿನ್ ಕುಮಾರ್ ಮಿಶ್ರಾ, ‘ಲಾಟ್ ಸಾಹೇಬ್’ ಮೆರವಣಿಗೆ ಸಾಗುವ ಮಾರ್ಗದ 20 ಮಸೀದಿಗಳಿಗೆ ಟಾರ್ಪಾಲು ಹೊದಿಸಲಾಗುವುದು. ಈ ಮಾರ್ಗದುದ್ದಕ್ಕೂ 350 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಮಸೀದಿಗಳು ಹಾಗೂ ಟ್ರಾನ್ಫ್‌ಫಾರ್ಮರ್‌ಗಳ ಬಳಿ ತಡೆಗೋಡೆಗಳನ್ನು ನಿರ್ಮಿಸಲಾಗಿದೆ ಎಂದರು.
‘ಲಾಟ್ ಸಾಹೇಬ್’ ಮೆರವಣಿಗೆ 18ನೇ ಶತಮಾನದಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯ. ಬ್ರಿಟಿಷರ ಲಾರ್ಡ್ ಜನರ ಬಾಯಲ್ಲಿ ಲಾಟ್ ಆಗಿದೆ. ಬ್ರಿಟಿಷ್ ಅಧಿಕಾರಿಯಂತೆ ವೇಷ ತೊಟ್ಟ ವ್ಯಕ್ತಿ ಎತ್ತಿನ ಗಾಡಿಯಲ್ಲಿ ಕುಳಿತುಕೊಂಡಿರುತ್ತಾನೆ. ಈ ಗಾಡಿ ಸಾಗುವಾಗ ಜನರು ಈ ವ್ಯಕ್ತಿಯತ್ತ ಪಾದರಕ್ಷೆಗಳನ್ನು ಎಸೆಯುತ್ತಾರೆ. ಈ ವಿಧಿಯೊಂದಿಗೆ ಹೋಳಿ ಆಚರಣೆಗೆ ಚಾಲನೆ ಸಿಗುತ್ತದೆ.
ಶಹಜಹಾನ್ ಪುರ ಮಾತ್ರವಲ್ಲದೆ ಸಂಭಾಲ್‌ನಲ್ಲೂ ಮಸೀದಿಗಳಿಗೆ ಹೊದಿಕೆಗಳನ್ನು ಹೊದಿಸಲಾಗಿದ್ದು, ಸಂಭಾಲ್ ಜಾಮಾ ಮಸೀದಿಯನ್ನು ಟಾರ್ಪಾಲಿನಿಂದ ಮುಚ್ಚಲಾಗಿದೆ. ಜಾಮಾ ಮಸೀದಿ ಮಾತ್ರವಲ್ಲದೆ ಹೋಳಿ ಮೆರವಣಿಗೆಯ ಮಾರ್ಗದಲ್ಲಿ ಬರುವ 10 ಮಸೀದಿಗಳನ್ನು ಇದೇ ರೀತಿಯಲ್ಲಿ ಮುಚ್ಚಲಾಗಿದೆ ಎಂದು ಹೇಳಲಾಗಿದೆ. ಒಂದೇ ತಿಂಗಳಲ್ಲಿ ಹೋಳಿ ಮತ್ತು ರಮ್ಜಾನ್ ಹಬ್ಬ ಬಂದಿದ್ದು, ಎರಡೂ ಧಾರ್ಮಿಕ ಕಾರ್ಯಕ್ರಮಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಮತ್ತು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.