ಹಲವು ವಿಮಾನಗಳು ಡೈವರ್ಟ್; ಬೆಂಗಳೂರು ಫ್ಲೈಟ್ ವಾಪಸ್
ಮಂಗಳೂರು: ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ನಿನ್ನೆ ರಾತ್ರಿ ಅನಿರೀಕ್ಷಿತವಾಗಿ ಧಾರಾಕಾರ ಮಳೆ ಸುರಿದಿದ್ದು, ಇದರಿಂದ ಕಡುಬೇಸಿಗೆಯ ಬಿಸಿಲಿಗೆ ಬಳಲಿ ಬೆಂಡಾಗಿದ್ದ ಜನ ತುಸು ತಂಪಾಗಿದ್ದರೂ ಮಳೆಯಿಂದಾಗಿ ಅಲ್ಲಲ್ಲಿ ಅನಾಹುತಗಳೂ ಸಂಭವಿಸಿವೆ.
ಮಂಗಳೂರು ನಗರದಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಶುರುವಾದ ಗುಡುಗು ಸಿಡಿಲು ಗಾಳಿಯಿಂದೊಡಗೂಡಿದ ಮಳೆ ರಾತ್ರಿ 11 ಗಂಟೆಯವರೆಗೂ ಧಾರಾಕಾರವಾಗಿ ಸುರಿದಿದೆ. ಇದರ ಪರಿಣಾಮ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲವು ವಿಮಾನಗಳ ಲ್ಯಾಂಡಿಂಗ್ ಸಾಧ್ಯವಾಗದೆ ವಿಮಾನಗಳನ್ನು ಪಕ್ಕದ ಕಣ್ಣೂರಿನ ವಿಮಾನ ನಿಲ್ದಾಣಗಳಿಗೆ ಕಳುಹಿಸಲಾಗಿದೆ.
ಮಂಗಳೂರಿಗೆ ಬರುವ ಕೆಲವು ವಿಮಾನಗಳನ್ನು ಡೈವರ್ಟ್ ಮಾಡಲಾಗಿದೆ. ಮಂಗಳೂರಿನಲ್ಲಿ ಲ್ಯಾಂಡ್ ಮಾಡಲು ಸಾಧ್ಯವಾಗದ ಕಾರಣ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ವಿಮಾನಗಳನ್ನು ಕಳುಹಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದ ಎರಡು ವಿಮಾನಗಳನ್ನು ಲ್ಯಾಂಡಿಂಗ್ ಕಷ್ಟವಾಗಿ ವಾಪಾಸ್ ಬೆಂಗಳೂರಿಗೆ ಹಿಂದುರುಗಿಸಲಾಗಿದೆ. ಮಂಗಳೂರಿನ ಬಜ್ಪೆ, ಕಿನ್ನಿಪದವು ಬಳಿ ಸಿಡಿಲು ಬಡಿದು ತೆಂಗಿನ ಮರ ಕ್ಕೆ ಬೆಂಕಿ ಹೊತ್ತಿಕೊಂಡಿದೆ. ಸುಳ್ಯ, ಕಡಬ, ಬೆಳ್ತಂಗಡಿ ಭಾಗದಲ್ಲಿ ಭಾರಿ ಮಳೆಯಾಗಿದೆ. ಕಡಬದಲ್ಲಿ ಗಾಳಿ ಸಹಿತ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ 30ಕ್ಕೂ ಅಧಿಕ ವಿದ್ಯುತ್ ಕಂಬಗಳು ಗಾಳಿಗೆ ಧರಾಶಾಯಿಯಾಗಿ ರಾತ್ರಿಯಿಡೀ ಜನ ವಿದ್ಯುತ್ ಇಲ್ಲದೆ ಪರಿತಪಿಸಿದ್ದಾರೆ. ಉಡುಪಿ ಜಿಲ್ಲೆಯ ಕೆಲವೆಡೆ ಮಳೆ ಸುರಿದಿದ್ದು, ಕಾರ್ಕಳ ತಾಲೂಕಿನಲ್ಲಿ ಮಳೆಯ ಬಿರುಸು ಜೋರಾಗಿತ್ತು. ತಾಲೂಕಿನ ವಿವಿಧೆಡೆ ಮರಗಳು ಬಿದ್ದ, ಕಟ್ಟಡಗಳ ಛಾವಣಿ ಹಾರಿಹೋಗಿರುವ ಘಟನೆಗಳು ಸಂಭವಿಸಿವೆ.