ಸಿಐಡಿ ತನಿಖೆ ದಿಢೀರ್ ಹಿಂದೆಗೆದುಕೊಂಡ ಕುರಿತು ನಾನಾ ಅನುಮಾನ
ಬೆಂಗಳೂರು : ಕನ್ನಡ ಚಿತ್ರನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದೆ. ಇಬ್ಬರ ಸಚಿವರ ಹೆಸರು ಈ ಪ್ರಕರಣದಲ್ಲಿ ತುಳುಕು ಹಾಕುತ್ತಿರುವ ಬೆನ್ನಲ್ಲೆ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಒಂದು ಫೋಟೊ ಕಾಂಗ್ರೆಸ್‌ನ ಆಕ್ರೋಶಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರ್ ಆರೋಪಿ ರನ್ಯಾ ರಾವ್ ಜೊತೆ ಇರುವ ಫೋಟೊವನ್ನು ಬಿಜೆಪಿಯ ಸೋಷಿಯಲ್ ಮೀಡಿಯಾ ವಿಭಾಗ ಅಪ್‌ಲೋಡ್ ಮಾಡಿ ಗೋಲ್ಡ್ ಸ್ಮಗ್ಲರ್ ರನ್ಯಾ ಜೊತೆ ನಂಟಿರುವ ಸಚಿವರು ಯಾರು ಎಂಬುದನ್ನು ಬಹಿರಂಗಪಡಿಸುವಿರಾ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದೆ. ಇದಕ್ಕೆ ಕೆಪಿಸಿಸಿ ಹ್ಯಾಂಡಲ್ ಅನ್ನು ಟ್ಯಾಗ್ ಮಾಡಿದೆ. ಜೊತೆಗೆ,#CongressFailsKarnataka ಎನ್ನುವ ಶೀರ್ಷಿಕೆಯನ್ನು ನೀಡಿದೆ.
ಇದು ರನ್ಯಾ ರಾವ್ ಅವರ ಮದುವೆಯ ಫೋಟೊ ಎನ್ನಲಾಗಿದ್ದು, ಫೋಟೊದಲ್ಲಿ ಸಿದ್ದರಾಮಯ್ಯ, ಡಾ.ಪರಮೇಶ್ವರ್ ಮತ್ತು ರನ್ಯಾ ಕುಟುಂಬದ ಸದಸ್ಯರು ಜೊತೆಯಾಗಿ ನಿಂತಿರುತಿದ್ದಾರೆ. ಬಿಜೆಪಿ ಹಾಕಿರುವ ಪೋಸ್ಟಿಗೆ ಸಾಕಷ್ಟು ಕಾಮೆಂಟುಗಳು ಬಂದಿವೆ.
ರನ್ಯಾ ರಾವ್ ಪ್ರಕರಣದಲ್ಲಿ ಸಚಿವರ ಕೈವಾಡದ ಬಗ್ಗೆ ಕೇಳಿದಾಗ, ಇವೆಲ್ಲ ಕೇವಲ ಊಹಾಪೋಹಗಳು. ಇದು ಬಿಜೆಪಿಯ ಗೇಮ್ ಪ್ಲಾನ್. ಯಾವ ಸಚಿವರ ಹೆಸರಿದೆ? ಯಾರಾದರೂ ನೋಡಿದ್ದಾರಾ? ಕೇಳಿದ್ದಾರಾ? ನಾವು ಮದುವೆ ಸೇರಿದಂತೆ ಶುಭ ಕಾರ್ಯಕ್ರಮಗಳಿಗೆ ಹೋಗುತ್ತಿರುತ್ತೇವೆ. ಅಲ್ಲಿ ಅನೇಕರು ನಮ್ಮ ಜತೆ ಫೋಟೊ ತೆಗೆಸಿಕೊಳ್ಳುತ್ತಾರೆ. ಯಾರೋ ನನ್ನ ಪಕ್ಕ ಬಂದು ನಿಂತುಕೊಂಡ ತಕ್ಷಣ ನನಗೂ ಅವರಿಗೂ ಸಂಬಂಧ ಇದೆ ಎಂದು ಭಾವಿಸಲು ಸಾಧ್ಯವೇ? ಎಂದು ಸದನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದರು. ಆ ಬಳಿಕ ಈ ಫೊಟ್ ಅಪ್‌ಲೋಡ್ ಮಾಡಿ ಬಿಜೆಪಿ ಕಾಂಗ್ರಸ್‌ನ ಕಾಲೆಳೆದಿದೆ.
ಸಿಐಡಿ ತನಿಖೆ ದಿಢೀರ್ ವಾಪಸ್
ಈ ನಡುವೆ ಚಿನ್ನ ಸ್ಮಗ್ಲಿಂಗ್ ಕೇಸ್‌ನಲ್ಲಿ ರನ್ಯಾ ರಾವ್ ಪ್ರೊಟೊಕಾಲ್ ದುರ್ಬಳಕೆಯಾಗಿರುವ ಕುರಿತು ನಟಡೆಯುತ್ತಿದ್ದ ಸಿಐಡಿ ತನಿಖೆ ಆದೇಶವನ್ನು ಸರಕಾರ ದಿಢೀರ್ ವಾಪಸ್ ಪಡೆದಿರುವುದು ನಾನಾ ರೀತಿಯ ಅನುಮಾನಗಳಿಗೆ ಕಾರಣವಾಗಿದೆ.
ಪ್ರೊಟೊಕಾಲ್ ನೆರವು ಪಡೆದು ರನ್ಯಾ ರಾವ್ ಚಿನ್ನ ಸ್ಮಗ್ಲಿಂಗ್ ಮಾಡುತ್ತಿದ್ದಳು ಎಂದು ಡಿಆರ್‌ಐ ನ್ಯಾಯಾಲಯಕ್ಕೆ ತಿಳಿಸಿದೆ. ಹೀಗಾಗಿ ಪ್ರೊಟೊಕಾಲ್ ಪೊಲೀಸ್ ವೈಫಲ್ಯದ ಸಿಐಡಿ ತನಿಖೆ ನಡೆಸಲು ಸರಕಾರ ಆದೇಶಿಸಿತ್ತು. ಆದರೆ ಒಂದೇ ದಿನದಲ್ಲಿ ಈ ಆದೇಶ ವಾಪಸ್ ಪಡೆದಿರುವುದು ಚರ್ಚೆಗೆ ಗ್ರಾಸವಾಗಿದೆ. ಪ್ರೊಟೊಕಾಲ್ ದುರ್ಬಳಕೆ ಸಂಬಂಧ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಒಂದು ವಾರದಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ. ಹೀಗಾಗಿ ಸಿಐಡಿ ತನಿಖೆ ಆದೇಶ ಹಿಂಪಡೆಯುತ್ತಿರುವುದಾಗಿ ಸರಕಾರ ತಿಳಿಸಿದೆ.
ವಿಐಪಿ ಪ್ರೋಟೊಕಾಲ್ ವ್ಯವಸ್ಥೆ ರಕ್ಷಣೆ ಪಡೆದು ರನ್ಯಾ ರಾವ್ ದೇಶದ ಭದ್ರತೆಗೆ ಅಪಾಯ ತಂದೊಡ್ಡುವ ಚಿನ್ನ ಸ್ಮಗ್ಲಿಂಗ್ ನಲ್ಲಿ ಭಾಗಿಯಾಗಿದ್ದಾರೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಬುಧವಾರ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.