27 ಬಂಡುಕೋರರ ಹತ್ಯೆ, 200ಕ್ಕೂ ಅಧಿಕ ಪ್ರಯಾಣಿಕರು ಒತ್ತೆಸೆರೆಯಲ್ಲಿ
ಇಸ್ಲಾಮಾಬಾದ್ : ಪಾಕಿಸ್ಥಾನದಲ್ಲಿ ಬಲೂಚಿಸ್ಥಾನದ ಪ್ರತ್ಯೇಕವಾದಿಗಳು ಒಂದಿಡೀ ರೈಲನ್ನು ಅಪಹರಿಸಿ ನೂರಾರು ಪ್ರಯಾಣಿಕರನ್ನು ಒತ್ತೆಸೆರೆಯಲ್ಲಿಟ್ಟುಕೊಂಡಿದ್ದು, ಪ್ರಯಾಣಿಕರನ್ನು ರಕ್ಷಿಸಲು ಭದ್ರತಾ ಪಡೆಗಳು ತೀವ್ರ ಕಾರ್ಯಾಚರಣೆ ನಡೆಸುತ್ತಿವೆ. ಮಂಗಳವಾರ ಕ್ವೆಟ್ಟಾದಿಂದ ಪೇಷಾವರಕ್ಕೆ ಬರುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ಪ್ಯಾಸೆಂಜರ್ ರೈಲನ್ನು ʼದ ಬಲೂಚಿಸ್ಥಾನ್ ಲಿಬರೇಶನ್ ಆರ್ಮಿʼಯ ಬಂಡುಕೋರರು ಪ್ರಯಾಣಿಕರು ಮತ್ತು ಭದ್ರತಾ ಸಿಬ್ಬಂದಿ ಸಮೇತ ಅಪಹರಿಸಿಕೊಂಡು ಹೋಗಿದ್ದಾರೆ.
ರಾತ್ರಿಗಾಗುವಾಗ ಮಹಿಳೆಯರು ಮತ್ತು ಮಕ್ಕಳು ಸೇರಿ 155 ಪ್ರಯಾಣಿಕರನ್ನು ರಕ್ಷಿಸಲಾಗಿದೆ, ಹಾಗೂ ಈ ಕಾರ್ಯಾಚರಣೆಯಲ್ಲಿ 27 ಪ್ರತ್ಯೇಕವಾದಿಗಳನ್ನು ಗುಂಡಿಕ್ಕೆ ಸಾಯಿಸಲಾಗಿದೆ ಎಂದು ಪಾಕಿಸ್ಥಾನದ ಮಾಧ್ಯಮಗಳು ವರದಿ ಮಾಡಿವೆ.

ಬಲೂಚಿಸ್ಥಾನವನ್ನು ಸ್ವತಂತ್ರ ದೇಶ ಮಾಡಬೇಕೆಂದು ಹೋರಾಡುತ್ತಿರುವ ದ ಬಲೂಚಿಸ್ಥಾನ್ ಲಿಬರೇಶನ್ ಆರ್ಮಿ ಇನ್ನೂ 214 ಪ್ರಯಾಣಿಕರು ಒತ್ತೆಸೆರೆಯಲ್ಲಿದ್ದಾರೆ ಎಂದು ಹೇಳಿಕೊಂಡಿದೆ. ಭದ್ರತಾ ಪಡೆ ಕಾರ್ಯಾಚರಣೆ ಮುಂದುವರಿಸಿದರೆ ಎಲ್ಲ ಪ್ರಯಾಣಿಕರನ್ನು ಕೊಂದು ಹಾಕುವುದಾಗಿ ಪ್ರತ್ಯೇಕವಾದಿಗಳು ಎಚ್ಚರಿಸಿದ್ದಾರೆ. ರಾತ್ರಿಯಿಡೀ ಇಲ್ಲಿ ಗುಂಡಿನ ಚಕಮಕಿ ನಡೆದಿದೆ. ಬಂಡುಕೋರರು ಸೋಲುತ್ತಾ ಬಂದಿದ್ದಾರೆ ಎನ್ನಲಾಗಿದೆ.
ಒಂಬತ್ತು ಬೋಗಿಗಳುಳ್ಳ ಜಾಫರ್ ಎಕ್ಸ್‌ಪ್ರೆಸ್ ರೈಲು ಬಲೂಚಿಸ್ಥಾನ ಹಾದು ಹೋಗುತ್ತಿರುವಾಗ ಸುರಂಗ ಮಾರ್ಗದ ಬಳಿ ಹಳಿ ಸ್ಫೊಟಿಸಿ ರೈಲನ್ನು ಹೈಜಾಕ್ ಮಾಡಲಾಗಿದೆ. ಈ ವೇಳೆ ರೈಲಿನಲ್ಲಿ 425ಕ್ಕೂ ಅಧಿಕ ಪ್ರಯಾಣಿಕರು ಮತ್ತು 80 ಭದ್ರತಾ ಪಡೆ ಸಿಬ್ಬಂದಿಯಿದ್ದರು. ಈ ಭಾಗದಲ್ಲಿ ಉಗ್ರರ ಬೆದರಿಕೆ ಇರುವ ಕಾರಣ ಎಲ್ಲ ರೈಲುಗಳಲ್ಲಿ ಭದ್ರತಾ ಸಿಬ್ಬಂದಿ ಇರುತ್ತಾರೆ.
ಪ್ರತ್ಯೇಕವಾದಿಗಳು ನಗರದಿಂದ ದೂರವಿರುವ ಗ್ರಾಮೀಣ ಭಾಗದಲ್ಲಿ ರೈಲನ್ನು ತಡೆದು ನಿಲ್ಲಿಸಿದ್ದಾರೆ. ಅದರ ಸುತ್ತ ಸಶಸ್ತ್ರ ಬಂಡುಕೋರರು ಕಾವಲು ಕಾಯುತ್ತಿದ್ದಾರೆ. ಭದ್ರತಾ ಪಡೆಗಳು ಬೆಟ್ಟದ ತಪ್ಪಿನಿಂದ ಕಾರ್ಯಾಚರಣೆ ನಡೆಸುತ್ತಿವೆ ಎಂದು ವರದಿಗಳು ತಿಳಿಸಿವೆ. ರಾಜಕೀಯ ಕೈದಿಗಳನ್ನು ಮತ್ತು ಸೇನೆ ಅಪಹರಿಸಿರುವ ವ್ಯಕ್ತಿಗಳನ್ನು 48 ತಾಸಿನೊಳಗೆ ಬಿಡುಗಡೆ ಮಾಡಬೇಕೆಂದು ಬೇಡಿಕೆಯನ್ನು ಬಂಡುಕೋರರು ಇಟ್ಟಿದ್ದಾರೆ. ಯಾವ ಕಡೆಯಿಂದ ಬಂದರೂ ಬಂಡುಕೋರರ ಕಣ್ಣಿಗೆ ಬೀಳುವುದರಿಂದ ಭದ್ರತಾ ಪಡೆಗೆ ರಕ್ಷಣಾ ಕಾರ್ಯಾಚರಣೆ ಸವಾಲಾಗಿ ಪರಿಣಮಿಸಿದೆ ಎನ್ನಲಾಗಿದೆ.
