ವಿಧಾನ ಪರಿಷತ್ತಿನಲ್ಲಿ ಹದಿಹರೆಯದ ಮಕ್ಕಳ ಎದುರಿಸುತ್ತಿರುವ ಸಮಸ್ಯೆಗಳ ಕುರಿತು, ಅವರ ಭವಿಷ್ಯ ಸುಧಾರಿಸಲು ನಾವು ಏನು ಮಾಡಬೇಕು ಎಂಬ ಬಗ್ಗೆ ಮಾನ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಮಾತನಾಡಿದರು.
ಮಕ್ಕಳ ಖಿನ್ನತೆ ಬಗ್ಗೆ ಮಾತನಾಡಿದ ಅವರು, ಪೋಷಕರ ಅತಿಯಾದ ನಿರೀಕ್ಷೆಯೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಿದರು. “ನನ್ನ ಮಗು ಡಾಕ್ಟರ್ ಆಗಬೇಕು, ಇಂಜಿನಿಯರ್ ಆಗಬೇಕು, ಫಸ್ಟ್ ರ್ಯಾಂಕ್ ಪಡೆಯಬೇಕು” ಎಂಬ ಪೋಷಕರ ತೀವ್ರ ಮನೋಭಾವದ ಕಾರಣದಿಂದ ಮಕ್ಕಳು ಭಾರೀ ಒತ್ತಡ ಅನುಭವಿಸುತ್ತಿದ್ದಾರೆ. ಇದಲ್ಲದೆ, ಸಮಾಜ ಪೋಷಕರ ಆರ್ಥಿಕ ಸ್ಥಿತಿಯನ್ನು ನೋಡಿ ಮಕ್ಕಳನ್ನು ತೀರಾ ಬೇರೆ ದೃಷ್ಟಿಕೋನದಲ್ಲಿ ನೋಡುವುದೂ ಒಂದು ಪ್ರಮುಖ ಕಾರಣವಾಗಿದೆ.
ಇಂದಿನ ಪೀಳಿಗೆ ಹೆಚ್ಚಿನ ಸಮಯವನ್ನು ಮೊಬೈಲ್, ಟಿವಿ, ಇಂಟರ್ ನೆಟ್ ಗಳಲ್ಲಿ ಕಳೆಯುತ್ತಿದ್ದು, ಹೊರಾಂಗಣ ಆಟಗಳತ್ತ ಆಸಕ್ತಿ ತೋರುತ್ತಿಲ್ಲ. ಇದರಿಂದ ಖಿನ್ನತೆ ಮತ್ತು ಮಾನಸಿಕ ಒತ್ತಡ ಹೆಚ್ಚಾಗಿದೆ. ಶಾಲೆಗಳಲ್ಲಿ ಕ್ರೀಡೆಗೆ ಕಡ್ಡಾಯವಾಗಿ ಸಮಯ ಮೀಸಲಿಡಬೇಕು. ಕ್ರೀಡೆ ಮಕ್ಕಳಲ್ಲಿ ಶಾರೀರಿಕ ಹಾಗೂ ಮಾನಸಿಕ ದೃಢತೆ ಮೂಡಿಸುವುದರೊಂದಿಗೆ, ಅವರನ್ನು ರಾಷ್ಟ್ರೀಯ ಸೇವೆಗಳತ್ತ ಮುನ್ನಡೆಸುವ ಸಾಮರ್ಥ್ಯವನ್ನು ಬೆಳೆಸುತ್ತದೆ ಎಂದು ಅವರು ಒತ್ತಿ ಹೇಳಿದರು.
ಇದಲ್ಲದೆ, ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ ‘ಟೈಗರ್ ಪೇರೆಂಟಿಂಗ್’ ಉದಾಹರಣೆ ನೀಡುತ್ತಾ, ಪೋಷಕರು ತಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಸುವುದು ಸೂಕ್ತವಲ್ಲ ಎಂದು ಅವರು ಹೇಳಿದರು. ಪಠ್ಯಕ್ರಮದಲ್ಲಿ ನೀತಿ ಬೋಧನೆಯನ್ನು ಸೇರಿಸುವ ಮೂಲಕ ಮಕ್ಕಳಿಗೆ ಶಿಸ್ತಿನ ಮನೋಭಾವ ಬೆಳೆಸಬೇಕು. ಇದರಿಂದ ನಿರ್ಲಿಪ್ತ ಭಾವನೆ ಕಡಿಮೆಯಾಗುತ್ತದೆ. ಮಕ್ಕಳಲ್ಲಿ ಜಾತಿ, ಭಾಷೆ, ಸಮುದಾಯದ ವ್ಯತ್ಯಾಸವನ್ನು ಕಡಿಮೆ ಮಾಡಬೇಕು. ರಾಷ್ಟ್ರೀಯ ಸ್ವಯಂಸೇವಕ ಸಂಘ ಹಮ್ಮಿಕೊಳ್ಳುವ ಶಾಖೆಯಲ್ಲಿ ಆಟಗಳ ಮೂಲಕ ಮಕ್ಕಳಲ್ಲಿ ಸಮಾನತೆ, ಸಹಕಾರದ ಮನೋಭಾವವನ್ನು ಬೆಳೆಸುವ ಕೆಲಸ ನಡೆಯುತ್ತಿದೆಮತ್ತು ಇದರಿಂದ ಮಕ್ಕಳು ಸಮಾಜದ ಹಾಗು ರಾಷ್ಟ್ರದ ಒಳಿತಿಗಾಗಿ ಯೋಚಿಸಲು ಆರಂಭಿಸುತ್ತಾರೆ ಹಾಗು ರಾಷ್ಟ್ರಕ್ಕೆ ಉತ್ತಮ ಪ್ರಜೆ ಆಗುತ್ತಾರೆ, ಇದನ್ನು ಎಲ್ಲೆಡೆ ಪ್ರಚಾರ ಮಾಡಬೇಕಾಗಿದೆ ಎಂದು ಅವರು ಹೇಳಿದರು.