ಪಕ್ಷದ ಕಾರ್ಯಕರ್ತರಿಗಾಗಿ ಖಜಾನೆ ಲೂಟಿ ಮಾಡಬೇಡಿ; ಕೆಪಿಸಿಸಿ ಹಣ ಕೊಡಿ ಎಂದು ಆಗ್ರಹ
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆ ಸಮಿತಿಗಳನ್ನು ರಚಿಸಿ, ಅವುಗಳಿಗೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ನೇಮಿಸಿ ಅವರಿಗೆ ಪ್ರತಿತಿಂಗಳು ಸಾವಿರಗಟ್ಟಲೆ ಸಂಬಳ ಕೊಡುತ್ತಿರುವ ವಿಚಾರ ಭಾರಿ ವಿವಾದಕ್ಕೆ ಕಾರಣವಾಗಿದೆ. ವಿಪಕ್ಷ ಬಿಜೆಪಿ-ಜೆಡಿಎಸ್ ಸದನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಹೋರಾಟ ಶುರು ಮಾಡಿದೆ. ಸದನದ ಹೊರಗೂ ಇಂದು ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ.
ಗ್ಯಾರಂಟಿ ಅನುಷ್ಠಾನ ಸಮಿತಿಗಳು ಕಾಂಗ್ರೆಸ್ ಕಾರ್ಯಕರ್ತರ ಪಾಲಿನ ಗಂಜಿ ಕೇಂದ್ರಗಳು ಎಂಬ ಆರೋಪ ಹಿಂದಿನಿಂದಲೂ ಇದೆ. ಸರಕಾರ ಜನರ ತೆರಿಗೆ ಹಣವನ್ನು ತನ್ನ ಪಕ್ಷದ ಕಾರ್ಯಕರ್ತರನ್ನು ಸಾಕಲು ಪೋಲು ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಸಮಿತಿಗಳನ್ನು ರದ್ದುಗೊಳಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ತುರುವೇಕೆರೆ ಜೆಡಿಎಸ್ ಶಾಸಕ ಎಂ.ಟಿ ಕೃಷ್ಣಪ್ಪ ಮಂಗಳವಾರ ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುವುದರೊಂದಿಗೆ ವಿವಾದ ಶುರುವಾಗಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮಿತಿಗಳ ಸದಸ್ಯರನ್ನಾಗಿ ಮಾಡಲಾದ ಕಾಂಗ್ರೆಸ್ ಕಾರ್ಯಕರ್ತರಿಗೆ ಸರ್ಕಾರ ಸಂಬಳ ನೀಡುತ್ತಿದೆ. ಈ ಸಮಿತಿಗಳ ಸದಸ್ಯರಿಗೆ ವೇತನ ನೀಡಲು ತೆರಿಗೆದಾರರ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುವ ಸಮಿತಿಗಳು ಕಾಂಗ್ರೆಸ್ ಕಾರ್ಯಕರ್ತರ ನೇತೃತ್ವದಲ್ಲಿವೆ. ಕೆಪಿಸಿಸಿ ಅವರಿಗೆ ಸಂಬಳ ನೀಡಿದರೆ ನಮಗೆ ಯಾವುದೇ ಸಮಸ್ಯೆ ಇಲ್ಲ. ನಾವು ಶಾಸಕರು ಜನರಿಂದ ಆಯ್ಕೆಯಾದವರು. ಇದು ಪ್ರಜಾಪ್ರಭುತ್ವ ವ್ಯವಸ್ಥೆ. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಮಾನಾಂತರ ಸಮಿತಿಗಳನ್ನು ಸ್ಥಾಪಿಸುವ ಮೂಲಕ ನೀವು ಏನು ಮಾಡಲು ಪ್ರಯತ್ನಿಸುತ್ತಿದ್ದೀರಿ ಎಂದು ಸರ್ಕಾರವನ್ನು ಅಶೋಕ್ ಪ್ರಶ್ನಿಸಿದ್ದಾರೆ.
ಎಂ.ಟಿ ಕೃಷ್ಣಪ್ಪ ಆರೋಪವನ್ನು ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಬೆಂಬಲಿಸಿ, ಸರ್ಕಾರ ಈ ಸಮಿತಿಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. ಇದು ಬಿಸಿ ಚರ್ಚೆಗೆ ಕಾರಣವಾಯಿತು. ಇದಕ್ಕೂ ಮೊದಲು, ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದಾಗಲೂ ವಿರೋಧ ಪಕ್ಷಗಳ ಶಾಸಕರು ಪಟ್ಟು ಸಡಿಲಿಸಲಿಲ್ಲ.
ಗ್ಯಾರಂಟಿ ಅನುಷ್ಠಾನ ಮೇಲ್ವಿಚಾರಣಾ ಸಮಿತಿ ಸದಸ್ಯರಾಗಿ ಕೆಲಸ ಮಾಡುವ ಕಾಂಗ್ರೆಸ್ ಕಾರ್ಯಕರ್ತರಿಗೆ ಒಟ್ಟಾಗಿ ವರ್ಷಕ್ಕೆ ಸುಮಾರು 20 ಕೋಟಿ ರೂ. ಖರ್ಚು ಮಾಡಲಾಗುತ್ತದೆ. ಆಶಾ ಕಾರ್ಯಕರ್ತೆಯರು ಮತ್ತು ಮಧ್ಯಾಹ್ನದ ಬಿಸಿಯೂಟ ಕಾರ್ಯಕರ್ತೆಯರಿಗೆ ಮಾಸಿಕ 3,000 ರೂ. ಗೌರವಧನ ಪಾವತಿಸಲು ಸರ್ಕಾರಕ್ಕೆ ಸಾಧ್ಯವಾಗದಿದ್ದಾಗ, ಗ್ಯಾರಂಟಿ ಯೋಜನೆಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುವ ಕಾಂಗ್ರೆಸ್ ಕಾರ್ಯಕರ್ತರಿಗೆ ಸರ್ಕಾರ ಪ್ರತಿ ತಿಂಗಳು ತಲಾ 25,000 ರೂ.ಯಿಂದ 40,000 ರೂ. ಸುಲಭವಾಗಿ ಪಾವತಿಸುತ್ತಿದೆ. ಅದೂ ತಿಂಗಳಿಗೆ ಕೇವಲ ಎರಡು ಸಭೆಗಳನ್ನು ನಡೆಸುವುದಕ್ಕಾಗಿ ಎಂದು ಅಶೋಕ ಹೇಳಿದರು.
ಜಿಲ್ಲಾಮಟ್ಟದಲ್ಲಿ ಸಮಿತಿಯ ಅಧ್ಯಕ್ಷರು ಮಾಸಿಕ 40,000 ರೂ., ಉಪಾಧ್ಯಕ್ಷರು 10,000 ರೂ. ಮತ್ತು ಸದಸ್ಯರು 1,000 ರೂ. ವೇತನ ಪಡೆಯುತ್ತಾರೆ ಎಂದು ಸರ್ಕಾರ ಹೇಳಿದೆ. ತಾಲೂಕು ಮಟ್ಟದಲ್ಲಿ ಸಮಿತಿಯ ಅಧ್ಯಕ್ಷರು 25,000 ರೂ. ಮತ್ತು ಸದಸ್ಯರು 1,000 ರೂ. ಮಾಸಿಕ ವೇತನ ಪಡೆಯುತ್ತಾರೆ. ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಮಿತಿಗಳು ಶಾಸಕರ ನೇತೃತ್ವದಲ್ಲಿರುತ್ತವೆ ಎಂದು ಅಶೋಕ ಹೇಳಿದರು.