ಟಿವಿ ಚಾನೆಲ್‌ಗಳಲ್ಲಿ, ಸ್ಟೇಡಿಯಂ ಸುತ್ತಮುತ್ತ ತಂಬಾಕು, ಮದ್ಯದ ಜಾಹೀರಾತು ಹಾಕದಂತೆ ಆದೇಶ
ಹೊಸದಿಲ್ಲಿ: ಐಪಿಎಲ್ ಪಂದ್ಯಗಳು ನಡೆಯುವ ಕ್ರೀಡಾಂಗಣದ ಆವರಣದಲ್ಲಿ ಮತ್ತು ಪ್ರಸಾರದ ಸಮಯದಲ್ಲಿ ಎಲ್ಲ ರೀತಿಯ ತಂಬಾಕು ಮತ್ತು ಮದ್ಯದ ಜಾಹೀರಾತು ಮತ್ತು ಪ್ರಚಾರಗಳನ್ನು ನಿಷೇಧಿಸಲು ಐಪಿಎಲ್ ಮಂಡಳಿಗೆ ಕೇಂದ್ರ ಸರ್ಕಾರ ಆದೇಶಿಸಿದೆ.
ಈ ಸಂಬಂಧ ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್ ಅವರಿಗೆ ಪತ್ರ ಬರೆದಿರುವ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಪ್ರೊ.ಡಾ.ಅತುಲ್ ಗೋಯೆಲ್, ಇದು ಸಾರ್ವಜನಿಕ ಆರೋಗ್ಯವನ್ನು ಉತ್ತೇಜಿಸುವ ನಿಮ್ಮ ಸಾಮಾಜಿಕ ಮತ್ತು ನೈತಿಕ ಹೊಣೆಗಾರಿಕೆ ಎಂದು ಹೇಳಿದ್ದಾರೆ.
ಮಾರ್ಚ್ 22ರಿಂದ ಪ್ರಾರಂಭವಾಗುವ ಪಂದ್ಯಾವಳಿಯಲ್ಲಿ ಮತ್ತು ಪ್ರಸಾರವಾಗುವ ವಾಹಿನಿಯಲ್ಲಿ ತಂಬಾಕು ಮತ್ತು ಮದ್ಯದ ಜಾಹೀರಾತುಗಳನ್ನು ಪ್ರಸಾರ ಮಾಡಬಾರದು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಕ್ರಿಕೆಟ್ ಆಟಗಾರರು ಯುವಕರಿಗೆ ಮಾದರಿಯಾಗಿದ್ದು, ಆರೋಗ್ಯಕರ, ಸಕ್ರಿಯ ಜೀವನ ಶೈಲಿಯನ್ನು ಉತ್ತೇಜಿಸಬೇಕು. ಐಪಿಎಲ್ ದೇಶದ ಅತಿದೊಡ್ಡ ಟೂರ್ನಿಯಾಗಿದ್ದು, ಸರ್ಕಾರದ ಆದೇಶ ಸಾರ್ವಜನಿಕ ಆರೋಗ್ಯವನ್ನು ಉತ್ತೇಜಿಸಲು ಮತ್ತು ಸರ್ಕಾರದ ಆರೋಗ್ಯ ಉಪಕ್ರಮಗಳನ್ನು ಬೆಂಬಲಿಸಲು ಸಾಮಾಜಿಕ ಮತ್ತು ನೈತಿಕ ಹೊಣೆಗಾರಿಕೆಯನ್ನು ಹೊಂದಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ ಅವರಿಗೂ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ. ಐಪಿಎಲ್ ಆಟಗಳು ಮತ್ತು ಸಂಬಂಧಿತ ಐಪಿಎಲ್ ಪಂದ್ಯಗಳು ನಡೆಯುವ ಕ್ರೀಡಾಂಗಣದ ಆವರಣ ಹಾಗೂ ಪಂದ್ಯಗಳು ಪ್ರಸಾರವಾಗುವ ಚಾನೆಲ್‌ಗಳಲ್ಲಿ ತಂಬಾಕು ಮತ್ತು ಮದ್ಯದ ಜಾಹೀರಾತುಗಳನ್ನು ನಿಷೇಧಿಸುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಟೂರ್ನಿಗೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳು ಮತ್ತು ಕ್ರೀಡಾ ಸೌಲಭ್ಯಗಳಲ್ಲಿ ತಂಬಾಕು, ಮದ್ಯ ಉತ್ಪನ್ನಗಳ ಮಾರಾಟದ ಮೇಲಿನ ನಿಷೇಧವನ್ನು ಜಾರಿಗೆ ತರುವಂತೆ ಪತ್ರದಲ್ಲಿ ಸೂಚಿಸಲಾಗಿದೆ.