ಪ್ರಕರಣದಲ್ಲಿ ಭಾಗಿಯಾಗಿರುವ ಸಚಿವರ ಹೆಸರು ಬಹಿರಂಗಪಡಿಸಲು ಸುನಿಲ್ ಕುಮಾರ್ ಒತ್ತಾಯ
ಬೆಂಗಳೂರು: ಕನ್ನಡ ನಟಿ ರನ್ಯಾ ರಾವ್ ಜೊತೆ ನಂಟು ಹೊಂದಿರುವ ರಾಜ್ಯದ ಇಬ್ಬರು ಸಚಿವರ ಹೆಸರು ಬಹಿರಂಗಪಡಿಸಲು ಮತ್ತು ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ನಡೆಸಲು ಶಾಸಕ ಸುನಿಲ್ ಕುಮಾರ್ ನಿನ್ನೆ ಸದನದಲ್ಲಿ ಒತ್ತಾಯಸಿದ್ದಾರೆ. ಕಲಾಪದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಸುನಿಲ್ ಕುಮಾರ್ ನಟಿಯೊಬ್ಬರು ಭಾರಿ ಪ್ರಮಾಣದ ಚಿನ್ನ ಕಳ್ಳ ಸಾಗಾಟ ಮಾಡಿ ಸಿಕ್ಕಿಬಿದ್ದಿರುವ ವಿಚಾರ ಮಾಧ್ಯಮಗಳಲ್ಲಿ ಬಂದಿದೆ. ಈ ನಟಿಯ ಹಿಂದೆ ಕೆಲವು ಪ್ರಭಾವಿ ವ್ಯಕ್ತಿಗಳಿದ್ದು, ಇಬ್ಬರು ಸಚಿವರ ಸಹಿತ ಹಲವು ಪ್ರಭಾವಿಗಳು ಶಾಮೀಲಾಗಿರುವುದಾಗಿ ವರದಿಯಾಗಿದೆ. ಅವರ ಹೆಸರುಗಳನ್ನು ಬಹಿರಂಗಪಡಿಸಿ ತನಿಖೆಯನ್ನು ಕೇಂದ್ರೀಯ ಸಂಸ್ಥೆಯಿಂದ ನಡೆಸಿ ಸತ್ಯವನ್ನು ಬಯಲುಗೊಳಿಸಬೇಕೆಂದು ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ.
ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ರಾಜಕೀಯವಾಗಿಯೂ ಸದ್ದು ಮಾಡುತ್ತಿದ್ದು, ಇಡೀ ಪ್ರಕರಣದ ಹಿಂದೆ ಇರುವ ಸಚಿವರು ಸೇರಿದಂತೆ ಎಲ್ಲರ ಹೆಸರನ್ನು ಬಹಿರಂಗಪಡಿಸಬೇಕೆಂದು ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಮತ್ತಿತರರು ಒತ್ತಾಯಿಸಿದ್ದಾರೆ.
ಈ ನಡುವೆ ರನ್ಯಾ ರಾವ್ ನಿರ್ದೇಶಕಿಯಾಗಿರುವ ಕಂಪನಿಗೆ 12 ಎಕರೆ ಭೂಮಿ ಮಂಜೂರಾಗಿದ್ದು ಬಿಜೆಪಿ ಸರಕಾರದ ಅವಧಿಯಲ್ಲಿ ಎಂಬ ವಿಚಾರಕ್ಕೆ ಸ್ಪಷ್ಟನೆ ನೀಡಿರುವ ಹಿಂದಿನ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ರನ್ಯಾ ಕಂಪನಿಗೆ ಎಲ್ಲ ನಿಯಮಗಳನ್ನು ಅನುಸರಿಸಿ ಭೂಮಿ ಮಂಜೂರು ಮಾಡಲಾಗಿತ್ತು. ಆದರೆ ಕಂಪನಿ ನಿಗದಿತ ಮೊತ್ತ ಪಾವತಿಸದ ಕಾರಣ ಭೂಮಿ ಹಸ್ತಾಂತರವಾಗಿಲ್ಲ. ಮಂಜೂರು ಪ್ರಕ್ರಿಯೆಯಲ್ಲಿ ಕಂಪನಿ ಎಲ್ಲ ನಿಯಮಾವಳಿಗಳನ್ನು ಪಾಲಿಸಿತ್ತು, ಎಲ್ಲೂ ಅಕ್ರಮವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಚಿವರು ಭಾಗಿಯಾಗಿಲ್ಲ
ಈ ನಡುವೆ ಸಚಿವರು ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾವ ಸಚಿವರೂ ಭಾಗಿಯಾಗಿಲ್ಲ. ತನಿಖೆಯಲ್ಲಿ ಈಗಾಗಲೇ ಸಿಬಿಐ ಕೂಡ ಶಾಮೀಲಾಗಿರುವುದರಿಂದ ಸತ್ಯ ಹೊರಬರಲಿ ಎಂದು ಹೇಳಿದ್ದಾರೆ.
ಹೋಟೆಲ್ ಮಾಲೀಕನ ಮೊಮ್ಮಗ ಅರೆಸ್ಟ್
ಈ ನಡುವೆ ರನ್ಯಾ ರಾವ್ ಒಳಗೊಂಡಿರುವ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ಗೆ ಸಂಬಂಧಿಸಿ ಬೆಂಗಳೂರಿನ ಸ್ಟಾರ್ ಹೋಟೆಲ್ ಮಾಲೀಕರೊಬ್ಬರ ಮೊಮ್ಮಗನನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದಾರೆ. ರನ್ಯಾ ರಾವ್ ಗೆಳೆಯನಾಗಿರುವ ತರುಣ್ ರಾಜ್ ಡಿಆರ್‌ಐ ಅಧಿಕಾರಿಗಳು ಬಂಧಿಸಿದ ವ್ಯಕ್ತಿ. ದುಬೈನಲ್ಲಿ ರನ್ಯಾ ಜೊತೆ ತರುಣ್ ರಾಜ್ ಇದ್ದ ಬಗ್ಗೆ ಡಿಆರ್‌ಐಗೆ ಮಾಹಿತಿ ಸಿಕ್ಕಿ ಸ್ಮಗ್ಲಿಂಗ್ ಬಗ್ಗೆ ತರುಣ್‌ರಾಜ್‌ನನ್ನು ಡಿಆರ್‌ಐ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಎರಡು ದಿನಗಳಿಂದ ತರುಣ್ ರಾಜ್‌ನನ್ನು ಪ್ರಶ್ನಿಸಿ ಬಳಿಕ ಬಂಧಿಸಲಾಗಿದೆ.
ತರುಣ್ ರಾಜ್ ದುಬೈಯಲ್ಲಿ ಕೂಡ ಆರ್ಥಿಕ ವ್ಯವಹಾರ ಹೊಂದಿದ್ದ. ರನ್ಯಾ ಜೊತೆ ನಿಕಟ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ತರುಣ್ ರಾಜ್‌ನನ್ನು ಬಂಧಿಸಿದ ಡಿಆರ್‌ಐ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಧೀಶರು ತರುಣ್ ರಾಜ್‌ನನ್ನು 5 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ಮಾ.15ರವರಗೆ ತರುಣ್ ರಾಜ್‌ನನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ನ್ಯಾಯಾಲಯದಲ್ಲಿ ಗೋಳಾಡಿದ ನಟಿ
ನಿನ್ನೆ ನಟಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನನಗೆ ಡಿಆರ್‌ಐ ಅಧಿಕಾರಿಗಳು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ನ್ಯಾಯಾಧೀಶರ ಎದುರು ಗೋಳಾಡಿದ್ದಾಳೆ. ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದಾರೆ, ಉತ್ತರಿಸದಿದ್ದರೆ ಬೆದರಿಸಿ ಮಾನಸಿಕ ಒತ್ತಡ ಉಂಟು ಮಾಡುತ್ತಿದ್ದಾರೆ. ಎಲ್ಲೆಲ್ಲಿಗೂ ಕರೆದುಕೊಂಡು ಹೋಗಿ ತನಿಖೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾಳೆ.
ಆಕೆಯ ಆರೋಪವನ್ನು ನಿರಾಕರಿಸಿರಿದ ಡಿಆರ್‌ಐ ಅಧಿಕಾರಿಗಳು ಎಲ್ಲ ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ಆರೋಪಿಯ ಮೇಲೆ ಒತ್ತಡ ಹೇರಿಲ್ಲ, ಎಲ್ಲವನ್ನೂ ವೀಡಿಯೊ ಶೂಟಿಂಗ್ ಮಾಡಿದ್ದೇವೆ ಎಂದು ಹೇಳಿದ್ದಾರೆ.