ಮಾ.14ರಂದು ಚಂದ್ರಗ್ರಹಣ; ಮಾ.29ರಂದು ಸೂರ್ಯಗ್ರಹಣ
ಮಂಗಳೂರು: ಈ ವರ್ಷದ ಮೊದಲ ಚಂದ್ರಗ್ರಹಣ ಫಾಲ್ಗುಣ ಮಾಸದ ಹುಣ್ಣಿಮೆಯಂದು ಸಂಭವಿಸಲಿದೆ. ಈ ದಿನದಂದು ಹೋಳಿ ಹಬ್ಬವನ್ನು ಸಹ ಆಚರಿಸಲಾಗುತ್ತದೆ. ಭಾರತೀಯ ಕಾಲಮಾನದ ಪ್ರಕಾರ ಈ ಚಂದ್ರಗ್ರಹಣ ಮಾರ್ಚ್ 14ರಂದು ಬೆಳಿಗ್ಗೆ 9.29ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 3.29ಕ್ಕೆ ಕೊನೆಗೊಳ್ಳಲಿದೆ. ಸುದೀರ್ಘ ಆರು ತಾಸು ಚಂದ್ರಗ್ರಹಣ ಇದ್ದರೂ ಈ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.
ಇದೇ ತಿಂಗಳಲ್ಲಿ ಸೂರ್ಯಗ್ರಹಣ ಕೂಡ ಸಂಭವಿಸಲಿದೆ. ಖಗೋಲ ಶಾಸ್ತ್ರಜ್ಞರ ಪ್ರಕಾರ ಮಾ.29ರಂದು ಸೂರ್ಯಗ್ರಹಣ ಸಂಭವಿಸಲಿದ್ದು, ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2.20ಕ್ಕೆ ಗ್ರಹಣ ಹಿಡಿದು ಸಂಜೆ 6.13ಕ್ಕೆ ಕೊನೆಗೊಳ್ಳುತ್ತದೆ. ಸಂಜೆ 4.17ಕ್ಕೆ ಪೂರ್ಣ ಪ್ರಮಾಣದ ಗ್ರಹಣ ಸಂಭವಿಸಲಿದೆ.
ಸೂರ್ಯಗ್ರಹಣ ಕೂಡ ಭಾರತದಲ್ಲಿ ಗೋಚರಿಸುವುದಿಲ್ಲ. ಸೂರ್ಯಗ್ರಹಣ ಏಷ್ಯಾದ ಕೆಲವು ಭಾಗಗಳಲ್ಲಿ, ಆಫ್ರಿಕಾ, ಯುರೋಪ್, ಅಟ್ಲಾಂಟಿಕ ಮಹಾಸಾಗರ, ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕದಲ್ಲಿ ಗೋವಚರಿಸಲಿದೆ ಎಂದು ನಾಸಾ ತಿಳಿಸಿದೆ. ಈ ವರ್ಷವೇ ಸೆಪ್ಟೆಂಬರ್ 21ರಂದು ಇನ್ನೊಂದು ಸೂರ್ಯಗ್ರಹಣ ಸಂಭವಿಸಲಿದೆ. ಇದಕ್ಕೂ ಮೊದಲು ಸೆ.7ರಂದು ಚಂದ್ರಗ್ರಹಣವೂ ಇದೆ. ಹೀಗೆ 2025ನೇ ವರ್ಷ ಚಂದ್ರಗ್ರಹಣ ಮತ್ತು ಸೂರ್ಯಗ್ರಹಣ ಒಂದೇ ತಿಂಗಳಲ್ಲಿ ಸಂಭವಿಸುವ ಖಗೋಲ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ.
ಜ್ಯೋತಿಷ್ಯದಲ್ಲಿ ಗ್ರಹಣವನ್ನು ಅಶುಭವೆಂದು ಪರಿಗಣಿಸಲಾಗಿದೆ. ಗ್ರಹಣದ ಸಮಯದಲ್ಲಿ ಆಹಾರ ತಿನ್ನುವುದು ಮತ್ತು ಕುಡಿಯುವುದನ್ನು ನಿಷೇಧಿಸಲಾಗಿದೆ. ಈ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡುವುದರಿಂದ ಜೀವನದಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತವೆ ಎಂದು ನಂಬಲಾಗಿದೆ. ಗ್ರಹಣ ಭಾರತದಲ್ಲಿ ಗೋಚರಿಸದಿದ್ದರೂ ಶ್ರದ್ಧೆಯುಳ್ಳವರು ಗ್ರಹಣದ ದಿನದಂದು ಉಪವಾಸ ಮಾಡುತ್ತಾರೆ. ದೇವಸ್ಥಾನಗಳಲ್ಲಿ ಪೂಜೆಗಳ ಸಮಯ ಬದಲಾಗುತ್ತದೆ ಮತ್ತು ಅನ್ನದಾನ ಇತ್ಯಾದಿಗಳು ಇರುವುದಿಲ್ಲ.