ಪುತ್ತೂರು: ನಗರಸಭಾ ವ್ಯಾಪ್ತಿಗೆ ಮಾಡಿದ ಬಿ ಖಾತಾ ಕುರಿತು ಪತ್ರಿಕಾಗೋಷ್ಠಿ ನಡೆಸಿ ಜನರಲ್ಲಿ ಗೊಂದಲ ಹಾಗೂ ಅರ್ಜಿಗಳೇ ಬಾರದೆ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಶಿಸ್ತು ಸಮಿತಿಗೆ ಆದೇಶಿಸುವಂತೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಲಾಗಿದೆ ಎಂದು ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಸಂಚಾಲಕ ಇಸಾಕ್ ಸಾಲ್ಮರ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ಒಂದು ಸಾವಿರ ಜನಕ್ಕೆ ಈ ಕುರಿತು ಸಮಸ್ಯೆಯಿದ್ದು, ಅರ್ಜಿ ಸಲ್ಲಿಸಲು ಹಿಂಜರಿಕೆ ಉಂಟಾಗಿದೆ. ಪರಿಣಾಮ ಅರ್ಜಿಗಳೇ ಬಾರದೆ ನಷ್ಟ ಉಂಟು ಮಾಡಲು ಕಾರಣವಾಗಿದೆ ಎಂದು ಆರೋಪಿಸಿದರು.
ಕಳೆದ ಹಲವಾರು ವರ್ಷಗಳಿಂದ ಪುತ್ತೂರು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಬೇರೆ ಬೇರೆ ವಿಚಾರಗಳ ಬಗ್ಗೆ ಪಕ್ಷ ವಿರೋಧಿ ಚಟುವಟಿಕೆಗಳ ಕುರಿತು ದೂರು ನೀಡಿದ್ದರೂ ಮಹಮ್ಮದಾಲಿಯವರ ಮೇಲೆ ಯಾವುದೇ ಕೈಗೊಂಡಿರುವುದಿಲ್ಲ. ಈ ಕಾರಣಕ್ಕಾಗಿಯೇ ಪದೇ ಪದೇ ಪಕ್ಷ ಮತ್ತು ಸರಕಾರದ ಕಾರ್ಯಕ್ರಮವನ್ನು ಟೀಕಿಸುತ್ತಾ ಜನರಲ್ಲಿ ಗೊಂದಲ ಮೂಡಿಸುತ್ತಿರುವ ಮಹಮ್ಮದಾಲಿ ಹಾಗೂ ಪತ್ರಿಕಾಗೋಷ್ಠಿಗೆ ಸಾಥ್ ನೀಡಿರುವ ಇತರ ನಾಲ್ಕು ಮಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ನಗರಸಭೆ ಸದಸ್ಯರಾಗಿದ್ದ ಸಂದರ್ಭ ಅಧಿಕಾರಿಗಳ ಮೇಲಿನ ದ್ವೇಷದಿಂದ ಸುಮಾರು 60 ಕ್ಕೂ ಹೆಚ್ಚಿನ ಕಟ್ಟಡಗಳಿಗೆ ಆಕ್ಷೇಪಣೆ ಮಾಡಿರುತ್ತಾರೆ. ಇದೀಗ ಕಟ್ಟಡಗಳಿಗೆ ಡೋರ್ ನಂಬರ್ ಮತ್ತು ಅನುಮತಿ ಸಿಗುತ್ತಿರುವ ಕಾರಣ ಜನ ಹಾಗೂ ನಗರಸಭೆ ಅಧಿಕಾರಿಗಳಲ್ಲಿ ಗೊಂದಲ ಉಂಟು ಮಾಡುತ್ತಿರುವುದು ಅವರ ಕರೆದ ಪತ್ರಿಕಾಗೋಷ್ಠಿಯ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಅವರು ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.