ಪುತ್ತೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜನಶಿಕ್ಷಣ ಟ್ರಸ್ಟ್, ಸಾಂತ್ವನ ಕೇಂದ್ರ, ನಗರಸಭೆ, ತಾಲೂಕು ಆಡಳಿತ ಕಚೇರಿ, ತಾ.ಪಂ. ತಾಲೂಕು ಸಂಜೀವಿನಿ ಒಕ್ಕೂಟ, ಸುಗ್ರಾಮ ಜಾಗೃತಿ ವೇದಿಕೆಯ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಮಹಿಳಾ ದಿನಾಚರಣೆ ಸೋಮವಾರ ಪುರಭವನದಲ್ಲಿ ನಡೆಯಿತು.
ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ರಶ್ಮಿ ಮುಖ್ಯ ಅತಿಥಿಯಾಗಿ ಮಾತನಾಡಿ, ಮನೆಯಿಂದ ಹೊರ ಬರದ ಮಹಿಳೆಯರಿಗೆ ಮಾಹಿತಿ, ಅರಿವು ಮುಡಿಸಿ ಸಮಾಜದಲ್ಲಿ ಬೆರೆತು ಸಾಧನೆ ಮಾಡಲು ಪ್ರೋತ್ಸಾಹ ನೀಡಿದಾಗ ಮಹಿಳಾ ದಿನಾಚರಣೆಗೆ ಮಹತ್ವ ಬರುತ್ತದೆ. ಮಹಿಳೆ ಇಲ್ಲದಿದ್ದರೆ ಸರಿಯಾದ ರೀತಿಯಲ್ಲಿ ಒಂದು ಮನೆ ನಡೆಯಲು ಸಾಧ್ಯವಿಲ್ಲ. ಪ್ರಸ್ತುತ ಸೈಬರ್ ಪ್ರಕರಣಗಳಲ್ಲಿ ಮಹಿಳೆಯರು ವಂಚನೆಗೊಳಗಾಗುತ್ತಿದ್ದು, ಸೈಬರ್ ಕ್ರೈಂ ಕುರಿತು ಮಹಿಳೆಯರಿಗೆ ಸರಿಯಾದ ಮಾಹಿತಿ ದೊರಕಬೇಕು ಎಂದು ಅಭಿಪ್ರಾಯಪಟ್ಟರು.
ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗುರುವಿನ ಸ್ಥಾನದಲ್ಲಿರುವ ತಾಯಿ ಮಕ್ಕಳಿಗೆ ಸಂಸ್ಕೃತಿ ಬೆಳೆಸಬೇಕು. ಮಹಿಳೆಯರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಸರಕಾರದ ಯೋಜನೆಗಳ ಪ್ರಯೋಜನಗಳನ್ನೂ ಪಡೆದುಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಮಾತನಾಡಿ, ಈಗ ಮಹಿಳೆಯರಿಗೆ ಪರ್ವ ಕಾಲ. ಸಿದ್ಧರಾಮಯ್ಯ ನೇತೃತ್ವದ ಸರಕಾರ ಮಹಿಳೆಯ ಪ್ರಗತಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಗೃಹಲಕ್ಷ್ಮೀ ಯೋಜನೆಯಲ್ಲಿ ಪುತ್ತೂರು ತಾಲೂಕಿನ 38 ಸಾವಿರ ಕುಟುಂಬಗಳಿಗೆ 102 ಕೋಟಿ ಹಣ ಜಮೆ ಆಗಿದೆ. ಶಕ್ತಿ ಯೋಜನೆ ಮೂಲಕ 1.14 ಕೋಟಿ ಮಂದಿಗೆ 54 ಕೋಟಿಯಷ್ಟು ಪ್ರಯೋಜನವಾಗಿದೆ ಎಂದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಮಾತನಾಡಿ, ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಪ್ರಾಬಲ್ಯ ಸಾಧಿಸಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ 50 ಶೇ. ಮೀಸಲಾತಿಯಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ 65 ಶೇ. ಮಹಿಳಾ ಫಲಾನುಭವಿಗಳಿದ್ದಾರೆ ಎಂದರು.