ಪುಣ್ಯಕ್ಞೇತ್ರಗಳ 500 ಮೀಟರ್‌ ವ್ಯಾಪ್ತಿಯಲ್ಲಿ ಸೋಪ್‌, ಶ್ಯಾಂಪೂ ಮಾರಾಟ ನಿಷೇಧ

ಜಲಮೂಲ ಮಲಿನಗೊಳಿಸುವುದನ್ನು ತಡೆಯಲು ಸರಕಾರ ಸೂಚನೆ

ಬೆಂಗಳೂರು: ಪುಣ್ಯಕ್ಷೇತ್ರಗಳ ಬಳಿಯಿರುವ ನದಿ, ಸರೋವರ, ಕಲ್ಯಾಣಿ, ಸ್ನಾನಘಟ್ಟಗಳಿಗೆ ತ್ಯಾಜ್ಯ ಎಸೆದು ಅಪವಿತ್ರಗೊಳಿಸುವುದನ್ನು ತಡೆಯಲು ಸರಕಾರ ಮುಂದಾಗಿದ್ದು, ಇಂಥ ಸ್ಥಳಗಳ 500 ಮೀಟರ್ ವ್ಯಾಪ್ತಿಯ ಸುತ್ತಮುತ್ತ ಸೋಪ್‌, ಶ್ಯಾಂಪೂ ಮಾರಾಟವನ್ನು ನಿಷೇಧಿಸಲು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.
ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಪುಣ್ಯಕ್ಷೇತ್ರಗಳ ಬಳಿ ಇರುವ ಜಲಮೂಲಗಳಲ್ಲಿ ಭಕ್ತರು, ಪ್ರವಾಸಿಗರು ಸ್ನಾನಮಾಡಿ ಉಳಿದ ಶ್ಯಾಂಪೂ ಮತ್ತು ಸೋಪಿನ ಸ್ಯಾಷೆಗಳನ್ನು ದಂಡೆಯಲ್ಲಿ ಎಸೆದು ಹೋಗುತ್ತಿದ್ದಾರೆ. ಅಲ್ಲಿನ ಪರಿಸರದಲ್ಲಿ ಕಸದ ಪ್ರಮಾಣ ಹೆಚ್ಚುವುದಲ್ಲದೆ, ಈ ರಾಸಾಯನಿಕ ವಸ್ತು ಮತ್ತು ಪ್ಲಾಸ್ಟಿಕ್ ಜಲಮೂಲವನ್ನು ಸೇರುತ್ತಿವೆ. ಇದರಿಂದ ನೀರು ಕಲುಷಿತವಾಗುತ್ತಿದೆ. ಜೊತೆಗೆ ಜಲಚರಗಳೂ ಸಾಯುತ್ತಿವೆ ಎಂದು ತಿಳಿಸಿದ್ದಾರೆ.

ಪುಣ್ಯಕ್ಷೇತ್ರಗಳ ಬಳಿ ಇರುವ ಸಣ್ಣ-ಪುಟ್ಟ ಅಂಗಡಿಗಳಲ್ಲಿ ಒಂದೆರಡು ರೂಪಾಯಿಯ ಶ್ಯಾಂಪೂ ಮತ್ತು ಐದರಿಂದ ಹತ್ತು ರೂಪಾಯಿಯ ಸೋಪಿನ ಪ್ಯಾಕೆಟ್ ಮಾರಾಟ ಮಾಡಲಾಗುತ್ತಿದೆ. ಅಗ್ಗದ ಬೆಲೆಯಲ್ಲಿ ಸಿಗುವುದರಿಂದ, ಉಳಿದ ಸೋಪು-ಶ್ಯಾಂಪೂವನ್ನು ಜನರು ಅಲ್ಲೇ ಎಸೆದು ಹೋಗುತ್ತಾರೆ. ಹೀಗಾಗಿ ಇವು ಸುಲಭವಾಗಿ ಸಿಗದಂತೆ ಕ್ರಮ ತೆಗೆದುಕೊಳ್ಳಬೇಕು. ಇದಕ್ಕಾಗಿ ಪುಣ್ಯಕ್ಷೇತ್ರಗಳ ಜಲಮೂಲಗಳಿಂದ 500 ಮೀಟರ್ ವ್ಯಾಪ್ತಿಯಲ್ಲಿ ಇವುಗಳ ಮಾರಾಟವನ್ನು ನಿಷೇಧಿಸಬೇಕು ಎಂದು ನಿರ್ದೇಶಿಸಿದ್ದಾರೆ.































 
 

ಹಲವು ಭಕ್ತರು ಮೂಢನಂಬಿಕೆಗಳ ಕಾರಣದಿಂದ, ಸ್ನಾನದ ನಂತರ ಒದ್ದೆ ಬಟ್ಟೆಗಳನ್ನು ನೀರಿನಲ್ಲೇ ಹರಿಬಿಟ್ಟು ಹೋಗುತ್ತಿದ್ದಾರೆ. ಕೆಲವು ತೀರ್ಥಕ್ಷೇತ್ರಗಳಲ್ಲಂತೂ ರಾಶಿರಾಶಿ ವಸ್ತ್ರಗಳು ಬಿದ್ದಿವೆ. ಇದರಿಂದಲೂ ಸ್ವಚ್ಛತೆ ಹಾಳಾಗುತ್ತಿದೆ ಮತ್ತು ಪುಣ್ಯಕ್ಷೇತ್ರಗಳ ಜಲಮೂಲಗಳು ಕಲುಷಿತವಾಗುತ್ತಿವೆ. ಈ ಕ್ರಿಯೆಯನ್ನೂ ನಿರ್ಬಂಧಿಸುವ ಕೆಲಸ ಮಾಡಿ ಎಂದು ಸೂಚನೆ ನೀಡಿದ್ದಾರೆ.
ಸಂಬಂಧಿತ ಇತರ ಇಲಾಖೆಗಳ ನೆರವು ಮತ್ತು ಸಹಕಾರ ಪಡೆದು ಈ ಸೂಚನೆಗಳನ್ನು ಜಾರಿಗೆ ತರಬೇಕು. ಇದರಿಂದ ನದಿ-ಕೊಳ, ಸರೋವರಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳಲು ಸಾಧ್ಯ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top