ನೆಲ್ಲಿದಡಿ ಗುತ್ತು ವಿವಾದ : ಯಥಾಸ್ಥಿತಿಗೆ ಜಿಲ್ಲಾಧಿಕಾರಿ ಸೂಚನೆ

ಶತಮಾನಗಳಿಂದ ನಡೆಯುತ್ತಿರುವ ದೈವಾರಾಧನೆಗೆ ಅಡ್ಡಿಯಾಗದಂತೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ

ಮಂಗಳೂರು: ಮಂಗಳೂರು ವಿಶೇಷ ಆರ್ಥಿಕ ವಲಯ (ಎಂಎಸ್‌ಇಝಡ್‌)ನಿಂದ ನೆಲ್ಲಿದಡಿ ಗುತ್ತಿನ ಪ್ರಸಿದ್ಧ ಕಾಂತೇರಿ ಜುಮಾದಿ ದೈವದ ಆರಾಧನೆಗೆ ತೊಡಕುಂಟಾಗಿರುವ ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸಲು ಜಿಲ್ಲಾಡಳಿತ ಮುಂದಾಗಿದ್ದು, ಸದ್ಯಕ್ಕೆ ಅಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಸೂಚಿಸಿದ್ದಾರೆ. ನೆಲ್ಲಿದಡಿಯಲ್ಲಿ ಈವರೆಗೂ ದೈವಾರಾಧನೆ ನಿಂತಿಲ್ಲ. ಲಿಖಿತವಾಗಿ ಅನುಮತಿ ಪಡೆಯದಿದ್ದರೆ ಅವಕಾಶ ಇಲ್ಲ ಎಂದಿದ್ದರಿಂದ ಗೊಂದಲಕ್ಕೆ ಕಾರಣವಾಗಿದೆ. ಶಾಶ್ವತ ಪರಿಹಾರ ಸಿಗುವವರೆಗೂ ಯಥಾಸ್ಥಿತಿ ಕಾಪಾಡಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ನಿನ್ನೆ ಎಂಎಸ್‌ಇಝಡ್‌ ಅಧಿಕಾರಿಗಳು ಹಾಗೂ ಕುಟುಂಬಸ್ಥರ ಸಭೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್​ ಮತ್ತು ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಮಧ್ಯಸ್ಥಿಕೆಯಲ್ಲಿ ಸಭೆ ನಡೆದು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ. ಎಂಎಸ್‌ಇಝಡ್‌ ಅಧಿಕಾರಿಗಳು ಅನುಮತಿ ಇಲ್ಲ ಎಂದು ಬರೆದಿದ್ದಾರೆಯೇ ಹೊರತು ದೈವಾರಾಧನೆ ನಿಲ್ಲಿಸಬೇಕೆಂದು ಹೇಳಿಲ್ಲ. ಕಳೆದ ವರ್ಷವೂ ದೊಡ್ಡಮಟ್ಟದ ಬಂಡಿ ಉತ್ಸವ ಇಲ್ಲಿ ನಡೆದಿದೆ. ಪ್ರತ್ಯೇಕ ರಸ್ತೆ ನಿರ್ಮಾಣಕ್ಕೆ ಕಾನೂನಾತ್ಮವಾಗಿ ಸಾಧ್ಯತೆ ಬಗ್ಗೆ ಪರಿಶೀಲನೆ ಮಾಡಲು ಸೂಚಿಸಲಾಗಿದೆ ಎಂದು ಮುಲ್ಲೈ ಮುಗಿಲನ್‌ ಹೇಳಿದ್ದಾರೆ.

ಎಂಎಸ್‌ಇಝಡ್‌ ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ಮುಜರಾಯಿಗೆ ಸೇರಿದ ಕಾಂತೇರಿ ಜುಮಾದಿ ದೈವಸ್ಥಾನವಿದೆ. 2007ರಿಂದಲೂ ಬೇರೆ ರೀತಿಯಲ್ಲಿ ಭೂಸ್ವಾಧೀನ ಗೊಂದಲ ಇತ್ತು. ಪ್ರತಿ ತಿಂಗಳ ಸಂಕ್ರಮಣಕ್ಕೆ ದೈವಸ್ಥಾನಕ್ಕೆ ಹೋಗಲು ಅನುಮತಿ ನೀಡಬೇಕು ಎಂಬುದು ಕುಟುಂಬಸ್ಥರ ಮುಖ್ಯ ಒತ್ತಾಯವಾಗಿದೆ. ದೈವಾರಾಧನೆ ಪ್ರಕ್ರಿಯೆಗಳಿಗೆ ಅಡಚಣೆ ಮಾಡಬಾರದು ಎಂಬ ಬೇಡಿಕೆ ಇದ್ದು, ಇಷ್ಟು ವರ್ಷ ಆಚರಣೆ ಮಾಡುತ್ತಾ ಬಂದಿದ್ದಾರೆ, ಈವರೆಗೂ ತೊಂದರೆಯಾಗಿಲ್ಲ. ಕುಟುಂಬಸ್ಥರು ಶಾಶ್ವತ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ. ಜಾಗ ಸ್ವಾಧೀನವಾಗಿದ್ದು, ವಿಶೇಷ ಆರ್ಥಿಕ ವಲಯದೊಳಗಿದೆ. ವಿಶೇಷ ಆರ್ಥಿಕ ವಲಯ ಕೇಂದ್ರ ಸರ್ಕಾರದ ಅಧೀನಕ್ಕೊಳಪಡುತ್ತದೆ ಎಂದು ಜಿಲಾಧಿಕಾರಿ ತಿಳಿಸಿದ್ದಾರೆ.































 
 

ತುಳುನಾಡಿನ ನಂಬಿಕೆಯನ್ನು ಕಾನೂನು ಹಾಗೂ ಸಂವಿಧಾನದ ಚೌಕಟ್ಟಿನ ಅಡಿಯಲ್ಲಿ ಉಳಿಸುವ ಪ್ರಯತ್ನ ಮಾಡುತ್ತೇವೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿಶೇಷ ಆರ್ಥಿಕ ವಲಯದ ಅಧಿಕಾರಿಗಳ ಹಾಗೂ ಗುತ್ತು ಮನೆತನದವರ ಸಭೆ ನಡೆದಿದೆ. ಧಾರ್ಮಿಕ ವಿಧಿವಿಧಾನಗಳಿಗೆ ತೊಂದರೆಯಾಗದ ರೀತಿ ಸಮಸ್ಯೆ ಬಗೆಹರಿಸಲು ಚರ್ಚೆ ನಡೆದಿದೆ. ನೆಲ್ಲಿದಡಿ ಗುತ್ತುವಿನ ಜಾಗ ಈಗಾಗಲೇ ಸ್ವಾಧೀನವಾಗಿದೆ. ಈ ಸಂಬಂಧ ಪುನರ್ವಸತಿ ಹಾಗೂ ಪರಿಹಾರವೂ ಸಿಕ್ಕಿದೆ. ಇದೆಲ್ಲದರ ನಡುವೆ ಸಮಸ್ಯೆ ಬಗೆಹರಿಸಲು ರೂಪುರೇಷೆ ನೀಡಲು ಸೂಚನೆ ನೀಡಲಾಗಿದೆ. ವರದಿ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಇಲ್ಲಿ ನಂಬಿಕೆಯ ವಿರುದ್ಧ ಯಾರೂ ಇಲ್ಲ. ತುಳುನಾಡಿನ ನಂಬಿಕೆಯನ್ನು ಕಾನೂನು ಮತ್ತು ಸಂವಿಧಾನದ ಚೌಕಟ್ಟಿನ ಅಡಿಯಲ್ಲಿ ಉಳಿಸುತ್ತೇವೆ. ಶಾಶ್ವತ ಪರಿಹಾರಕ್ಕಾಗಿ ಒಂದು ಸಭೆ ನಡೆದಿದೆ. ಇತ್ಯಾರ್ಥ ಮಾಡುವುದಿದ್ದರೆ ಯಾವ ರೀತಿ ಮಾಡಬಹುದು ಎಂಬುದರ ಬಗ್ಗೆ ವರದಿ ನೀಡುವುದಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಕ್ಯಾ.ಬ್ರಿಜೇಶ್‌ ಚೌಟ ಹೇಳಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top