ನಟಿಯ ಕಂಪನಿಗೆ ಮಂಜೂರಾಗಿದೆಯಾ 12 ಎಕರೆ ಜಮೀನು?
ಬೆಂಗಳೂರು: ಕನ್ನಡ ನಟಿ ರನ್ಯಾ ರಾವ್ ಒಳಗೊಂಡಿರುವ ಗೋಲ್ಡ್ ಸ್ಮಗ್ಲಿಂಗ್ ಜಾಲದ ಬಾಹುಗಳು ಬಹಳ ವಿಶಾಲವಾಗಿ ಚಾಚಿಕೊಂಡಿವೆ ಎಂಬ ವಿಚಾರ ತನಿಖೆ ಮುಂದುವರಿದಂತೆ ಬಯಲಾಗುತ್ತಿದೆ. ಕೆಲದಿನಗಳ ಹಿಂದೆಯಷ್ಟೇ ದಿಲ್ಲಿ ಮತ್ತು ಮುಂಬಯಿ ವಿಮಾನ ನಿಲ್ದಾಣಗಳಲ್ಲೂ ಭಾರಿ ಪ್ರಮಾಣದ ಚಿನ್ನದ ಬಿಸ್ಕಟ್‌ಗಳು ವಶವಾಗಿದ್ದು, ಈ ಪ್ರಕರಣಗಳಿಗೂ ರನ್ಯಾ ರಾವ್ ಒಳಗೊಂಡಿರುವ ಪ್ರಕರಣಕ್ಕೂ ಸಂಬಂಧ ಇದೆ ಎಂಬ ಅನುಮಾನ ಬಂದಿದೆ.
ಮೂರು ಕಡೆ ಒಂದೇ ರೀತಿಯ ಚಿನ್ನದ ಬಿಸ್ಕೆಟ್‌ಗಳು ವಶವಾಗಿವೆ. ಮೂರೂ ಕೃತ್ಯಗಳಲ್ಲಿ ಕಳ್ಳ ಸಾಗಾಟದ ತಂತ್ರವೂ ಒಂದೇ ರೀತಿ ಆಗಿತ್ತು. ಹೀಗಾಗಿ ಒಂದೇ ಗ್ಯಾಂಗ್ ಬೇರೆ ಬೇರೆ ವಿಮಾನ ನಿಲ್ದಾಣಗಳ ಮೂಲಕ ವಿದೇಶದಿಂದ ಚಿನ್ನವನ್ನು ಕಳ್ಳಮಾರ್ಗದಲ್ಲಿ ತರಿಸುತ್ತಿರುವ ಕುರಿತು ಡಿಆರ್‌ಐ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಡಿಆರ್‌ಐ ಅಧಿಕಾರಿಗಳು ರನ್ಯಾ ರಾವ್ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಈ ವೇಳೆ ಬಗೆದಷ್ಟು ಕುತೂಹಲಕಾರಿ ಮಾಹಿತಿ ಹೊರಬರುತ್ತಿವೆ. ಈ ಕೃತ್ಯದ ಹಿಂದೆ ಕೆಲವು ಪ್ರಭಾವಿ ವ್ಯಕ್ತಿಗಳು ಇರುವ ಸುಳಿವು ಪತ್ತೆಯಾಗಿದ್ದು, ರನ್ಯಾ ರಾವ್‌ಗೆ ರಾಜಕೀಯ ವ್ಯಕ್ತಿಗಳಿಗೂ ನಂಟು ಇದೆ. ಹೀಗಾಗಿ ಆಕೆಯ ಕಂಪನಿಗೆ ಸರ್ಕಾರದಿಂದ ಬರೋಬ್ಬರಿ 12 ಎಕರೆ ಜಮೀನು ಮಂಜೂರು ಮಾಡಿರಬಹುದು ಎಂಬ ಅನುಮಾನ ಇದ್ದು, ಈ ನಿಟ್ಟನಲ್ಲೂ ತನಿಖೆ ನಡೆಯುತ್ತಿದೆ.
ಆರೋಪಿ ರನ್ಯಾ ರಾವ್‌ಗೆ ಹಲವು ರಾಜಕೀಯ ನಾಯಕರ ಜೊತೆ ಸಂಪರ್ಕ ಇದೆ. ಅದರಲ್ಲೂ ಕಾಂಗ್ರೆಸ್ ಸರ್ಕಾರದ ಪ್ರಭಾವಿ ರಾಜಕಾರಣಿಯ ಹೆಸರು ಕೂಡ ಇದರಲ್ಲಿ ಕೇಳಿ ಬಂದಿರುವುದು ಕುತೂಹಲ ಕೆರಳಿಸಿದೆ.
ರನ್ಯಾ ರಾವ್ ನಿರ್ದೇಶಕಿಯಾಗಿರುವ ಕಂಪನಿಗೆ ಕರ್ನಾಟಕ ಸರ್ಕಾರ 12 ಎಕರೆ ಜಮೀನು ಮಂಜೂರು ಮಾಡಿದೆ. ಸಿರೋದ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಗೆ ರನ್ಯಾ ರಾವ್ ನಿರ್ದೇಶಕಿಯಾಗಿದ್ದು, ಈ ಕಂಪನಿಗೆ 2023ರಲ್ಲಿ ಕೆಐಎಡಿಬಿಯಿಂದ ಬರೋಬ್ಬರಿ 12 ಎಕರೆ ಜಮೀನು ಮಂಜೂರು ಮಾಡಲಾಗಿದೆ ಎನ್ನಲಾಗಿದೆ. ಮೂರು ತಿಂಗಳ ಹಿಂದೆ ಬೆಂಗಳೂರಲ್ಲಿ ರನ್ಯಾ ರಾವ್ ಅದ್ದೂರಿ ವಿವಾಹ ನಡೆದಿತ್ತು. ಆ ಮದುವೆಯಲ್ಲಿ ಕೆಲವು ಪ್ರಭಾವಿ ಸಚಿವರು ಭಾಗಿಯಾಗಿದ್ದರು.ಇವರೆಲ್ಲರ ಮೇಲೆ ತನಿಖಾಧಿಕಾರಿಗಳು ಕಣ್ಣಿಟ್ಟಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಬಂಧನವಾಗುತ್ತಿದ್ದಂತೆ ಪ್ರಭಾವಿ ಸಚಿವರು ಈ ಕೇಸನ್ನು ಮ್ಯಾನೇಜ್ ಮಾಡಲು ತೆರೆಮರೆಯಲ್ಲಿ ಕಸರತ್ತು ಮಾಡಿದ್ದಾರೆ. ಆದರೆ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ನಟಿಯನ್ನು ಬಂಧಿಸಿ ಈ ಕೇಸ್ ತನಿಖೆ ಮುಂದುವರಿಸಿದ್ದಾರೆ. ರನ್ಯಾ ರಾವ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಡಿಆರ್‌ಐ ಅಧಿಕಾರಿಗಳು ಈ ಪ್ರಕರಣದ ಹಿಂದೆ ಇರುವ ಪ್ರಭಾವಿ ಕೈಗಳ ಜಾಡು ಪತ್ತೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಾ.3ರ ರಾತ್ರಿ 7ಗಂಟೆ ಸುಮಾರಿಗೆ ಬಂದಿಳಿದ ರನ್ಯಾಳನ್ನು ಡಿಆರ್‌ಇ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ತಪಾಸಣೆಗೊಳಪಡಿಸಿದಾಗ 12 ಕೋಟಿ ರೂ. ಮೌಲ್ಯದ 14.8 ಕೆ.ಜಿ. ತೂಕದ ಚಿನ್ನದ ಬಿಸ್ಕತ್ತುಗಳು ಪತ್ತೆಯಾಗಿದ್ದವು. ಬಳಿಕ ರನ್ಯಾಳ ಮನೆ ಮೇಲೆ ದಾಳಿ ನಡೆಸಿದಾಗ 2.06 ಕೋಟಿ ಮೌಲ್ಯದ ಚಿನ್ನ ಹಾಗೂ 2.16 ಕೋಟಿ ನಗದು ಪತ್ತೆಯಾಗಿತ್ತು. ಒಟ್ಟಾರೆ ನಟಿ ರನ್ಯಾಳಿಂದ 17.16 ಕೋಟಿ ಮೌಲ್ಯದ ಚಿನ್ನ ಮತ್ತು ನಗದು ಪತ್ತೆಯಾಗಿತ್ತು. ಈಗ ತನಿಖೆಗೆ ಸಿಬಿಐ ಕೂಡ ಎಂಟ್ರಿಯಾಗಿದ್ದು, ಇದು ಇನ್ನೊಂದು ದೊಡ್ಡ ಹಗರಣವಾಗುವ ಸುಳಿವು ಸಿಕ್ಕಿದೆ.