ಪುತ್ತೂರು: ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ ಮತ್ತು ಯುವ ವಿಭಾಗಗಳ ಸಹಯೋಗದೊಂದಿಗೆ ತೆಂಕಿಲದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಭಾನುವಾರ ನಡೆಯಿತು.
ಉಡುಪಿ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಕನ್ನಡ ಪ್ರೊಫೆಸರ್, ಕನ್ನಡ ವಿಭಾಗ ಮುಖ್ಯಸ್ಥರಾಗಿರುವ ಡಾ. ಹರಿಣಾಕ್ಷಿ ಎಂ.ಡಿ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಸಾಧನಾಶೀಲರಾಗಬೇಕು. ಆಧುನಿಕ ಕಾಲದಲ್ಲಿ ಹೆಣ್ಣಿಗೆ ಇರುವ ಅವಕಾಶಗಳತ್ತ ಬೊಟ್ಟು ಮಾಡಿ ತೋರಿಸಿದ ಅವರು ಆ ಹಾದಿಯಲ್ಲಿ ಹೆಣ್ಣು ಮಕ್ಕಳು ಮುಂದುವರಿಯಬೇಕು. ನಮ್ಮ ಮಕ್ಕಳಿಗೆ ಸಂಸ್ಕೃತಿಯನ್ನು ಕಲಿಸುವ ಹೆಚ್ಚಿನ ಜವಾಬ್ದಾರಿಯನ್ನು ಮಹಿಳೆಯರು ವಹಿಸಿಕೊಳ್ಳಬೇಕು. ಏಕೆಂದರೆ ಆಕೆಯೇ ಕುಟುಂಬದಲ್ಲಿ ಹೆಚ್ಚು ಜವಾಬ್ದಾರಳು ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯಿತಿಯಲ್ಲಿ ಇಂಜಿನಿಯರ್ ಆಗಿರುವ ಶರಣ್ಯ ಮತ್ತು ಅಂತರರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಶಿಲ್ಪಾ ಅವರನ್ನು ಸನ್ಮಾನಿಸಲಾಯಿತು.
ನಗರ ಸಭಾ ಸದಸ್ಯೆ ಗೌರಿ ಬನ್ನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಒಕ್ಕಲಿಗ ಗೌಡ ಸೇವಾ ಸಂಘದ ಪೂರ್ವಾಧ್ಯಕ್ಷ, ನೋಟರಿ ನ್ಯಾಯವಾದಿ ಚಿದಾನಂದ ಬೈಲಾಡಿ ಮತ್ತು ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ್ದ ವಾರಿಜಾ ಬೆಳಿಯಪ್ಪ ಕಾಣಿಚ್ಚಾರು ಮಾತನಾಡಿ ಮಹಿಳೆಯರನ್ನು ಉತ್ತೇಜಿಸಿದರು. ಪುರುಷರು ನೀಡುತ್ತಿರುವ ಸಹಕಾರವನ್ನು ಗುರುತಿಸಿ ಅವರು ಶ್ಲಾಘಿಸಿದರು.
ಬನ್ನೂರು ವಲಯದ ಮಹಿಳಾ ಘಟಕಾಧ್ಯಕ್ಷೆ ಉಷಾ ಪದ್ಮನಾಭ ಸ್ವಾಗತಿಸಿ ತಾಲೂಕು ಮಹಿಳಾ ಘಟಕದ ಕಾರ್ಯದರ್ಶಿ ಸಂಧ್ಯಾ ಶಶಿಧರ್ ವಂದನಾರ್ಪಣೆ ಸಲ್ಲಿಸಿದರು. ನಗರ ಸಭಾ ಸದಸ್ಯೆ ಮೋಹಿನಿ ವಿಶ್ವನಾಥ ಮತ್ತು ಅಂಗನವಾಡಿ ಶಿಕ್ಷಕಿ ವನಿತಾ ಕೊರಗಪ್ಪ ಅವರು ಸಾಧಕರನ್ನು ಪರಿಚಯಿಸಿದರು. ವಿವೇಕಾನಂದ ಶಾಲೆಯ ಶಿಕ್ಷಕಿ ಲತಾ ಅಮರನಾಥ್ ಮತ್ತು ಕುಮಾರಿ ಅನ್ವಿತಾ ಅಮರನಾಥ್ ಕಾರ್ಯಕ್ರಮ ನಿರೂಪಿಸಿದರು. ಅಮೃತಾ ಅಮರನಾಥ್ ವಿವಿಧ ಕಾರ್ಯಕ್ರಮಗಳಲ್ಲಿ ಸಹಕರಿಸಿದರು. ಬನ್ನೂರು ವಲಯ ಗೌಡ ಸಂಘ ಕಾರ್ಯಕ್ರಮವನ್ನು ಆಯೋಜಿಸಿತ್ತು.