ಮಾಜಿ ಅಧ್ಯಕ್ಷ ಅಸಾದ್ ಬೆಂಬಲಿಗರ ಮೇಲೆ ಪ್ರತೀಕಾರದ ಹಿಂಸಾಚಾರ
ಬೇರೂತ್: ಸಿರಿಯಾದಲ್ಲಿ ಕಳೆದ ಎರಡು ದಿನಗಳಿಂದ ಭದ್ರತಾ ಪಡೆಗಳು ಮತ್ತು ಪದಚ್ಯುತ ಅಧ್ಯಕ್ಷ ಬಾಶರ್ ಅಲ್ ಅಸಾದ್ ಬೆಂಬಲಿಗರ ನಡುವೆ ನಡೆಯುತ್ತಿರುವ ಭೀಕರ ಹಿಂಸಾಚಾರದಲ್ಲಿ 1000ಕ್ಕೂ ಅಧಿಕ ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೆಡಿಟೇರಿಯನ್ ಕರಾವಳಿಯಲ್ಲಿ ಎರಡು ದಿನಗಳಿಂದ ಭೀಕರ ಹಿಂಸಾಚಾರ ನಡೆಯುತ್ತಿದೆ. ದಂಗೆಯೆದ್ದಿರುವ ಅಲ್ವೈಟ್ ಸಮುದಾಯದ ಜನರನ್ನು ಭದ್ರತಾ ಪಡೆ ನಿರ್ದಯವಾಗಿ ಸಾಯಿಸುತ್ತಿದೆ ಎನ್ನಲಾಗಿದೆ.
ಸಿರಿಯಾದ ಹೊಸ ಸರಕಾರ ಮತ್ತು ಮಾಜಿ ಅಧ್ಯಕ್ಷ ಅಸಾದ್ ಬೆಂಬಲಿಗರ ನಡುವೆ ಗುರುವಾರದಿಂದೀಚೆಗೆ ಹಿಂಸಾಚಾರ ನಡೆಯುತ್ತಿದೆ. ಅಸಾದ್ ಕೂಡ ಸಿರಿಯಾದ ಅಲ್ಪಸಂಖ್ಯಾತ ಸಮುದಾಯದಯವಾದ ಅಲ್ವೈಟ್ ಪಂಗಡಕ್ಕೆ ಸೇರಿದವರು. ಸಿರಿಯಾದ ಕರಾವಳಿ ಮತ್ತು ಲಟಕಿಯ ಬೆಟ್ಟ ಪ್ರದೇಶಗಳಲ್ಲಿ ಅಲ್ವೈಟ್ ಸಮುದಾಯದವರನ್ನು ಭದ್ರತಾ ಪಡೆ ಮತ್ತು ಅದರ ಮಿತ್ರಕೂಟದ ಬಂದೂಕುಧಾರಿಗಳು ಸಾಯಿಸುತ್ತಿದ್ದಾರೆ ಎಂದು ಮಾನವ ಹಕ್ಕುಗಳ ಸಂಸ್ಥೆ ವರದಿ ಮಾಡಿದೆ. ಭದ್ರತಾ ಪಡೆಗಳು ಮತ್ತು ಹೊಸ ಸರಕಾರದ ಪರವಾಗಿರುವವರು ಜನರನ್ನು ಸಾಯಿಸಿ ಮನೆಗಳನ್ನು ಲೂಟಿ ಮಾಡುತ್ತಿದ್ದಾರೆ. ಕೊಲೆ ಮತ್ತು ಅತ್ಯಾಚಾರಗಳು ವ್ಯಾಪಕವಾಗಿ ನಡೆಯುತ್ತಿವೆ ಎಂದು ವರದಿಗಳು ತಿಳಿಸಿವೆ.
ಅಲ್ವೈಟ್ ಸಮುದಾಯದವರು ಅಧಿಕವಾಗಿರುವ ಲಟಕಿಯ ನಗರಕ್ಕೆ ವಿದ್ಯುತ್ ಮತ್ತು ನೀರಿನ ಪೂರೈಕೆ ಸ್ಥಗಿತಗೊಳಿಸಿ ಜನರನ್ನು ಸಾಯಿಸಲಾಗುತ್ತದೆ. ಮಾಜಿ ಅಧ್ಯಕ್ಷ ಅಸಾದ್ ಅವರ 148 ಅಂಗರಕ್ಷಕ ಪಡೆಯ ಸಿಬ್ಬಂದಿಯನ್ನೂ ಸಾಯಿಸಲಾಗಿದೆ. ಮೂರು ತಿಂಗಳ ಹಿಂದೆ ಬಂಡುಕೋರರು ಅಸಾದ್ ಅವರನ್ನು ಪದಚ್ಯುತಿಗೊಳಿಸಿ ಸಿರಿಯಾದ ಅಧಿಕಾರ ಸೂತ್ರ ಕೈಗೆತ್ತಿಕೊಂಡಿದ್ದಾರೆ. ಅನಂತರ ನಡೆಯುತ್ತಿರುವ ಹಿಂಸಾಚಾರ ಗುರುವಾರ ಉಲ್ಬಣಿಸಿ ಸಾಮೂಹಿಕ ಹತ್ಯೆಯ ರೂಪ ಪಡೆದುಕೊಂಡಿದೆ. ಸುನ್ನಿ ಮುಸ್ಲಿಮರು ಮತ್ತು ಅಲ್ವೈಟ್ ಸಮುದಾಯದವರ ಮೇಲೆ ಇಲ್ಲಿ ಬಹುಕಾಲದಿಂದ ಹಿಂಸಾಚಾರ ನಡೆಯುತ್ತಿದೆ.