ಶಿವಮೊಗ್ಗ, ಮೈಸೂರು, ಬೆಂಗಳೂರು ತಿರುಗಾಡಿ ಉಡುಪಿಗೆ ಬಂದಾಗ ಪತ್ತೆ
ಮಂಗಳೂರು : ಬಂಟ್ವಾಳ ತಾಲೂಕಿನ ಫರಂಗಿಪೇಟೆ ಕಿದೆಬೆಟ್ಟು ನಿವಾಸಿ ಪಿಯುಸಿ ವಿದ್ಯಾರ್ಥಿ ದಿಗಂತ್ ನಿಗೂಢ ನಾಪತ್ತೆ ಪ್ರಕರಣ ಕೊನೆಗೂ ನಿನ್ನೆ ಬಗೆಹರಿದಿದೆ. ದಿಗಂತ್ ನಾಪತ್ತೆ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿ ವಿಧಾನ ಮಂಡಲದ ಕಲಾಪದಲ್ಲೂ ಪ್ರತಿಧ್ವನಿಸಿತ್ತು. ಸ್ಪೀಕರ್ ಖಾದರ್ ನೀಡಿದ ಸೂಚನೆಯ ಬಳಿಕ ಪೊಲೀಸರು 11 ತಂಡಗಳನ್ನು ರಚಿಸಿ ಹುಡುಕಾಡಿ ದಿಗಂತ್‌ನನ್ನು ನಿನ್ನೆ ಉಡುಪಿಯ ಡಿಮಾರ್ಟ್ ಮಾಲ್‌ನಲ್ಲಿ ಪತ್ತೆಹಚ್ಚಿದ್ದಾರೆ. ಹಿಂದು ಸಂಘಟನೆಗಳಿಂದ ಪ್ರತಿಭಟನೆ ಸಹಿತ ಹಲವು ಬೆಳವಣಿಗೆಗಳಿಗೆ ಕಾರಣವಾಗಿದ್ದ ಈ ಪ್ರಕರಣದ ರಹಸ್ಯ ಈಗ ಬಯಲಾಗಿದೆ.
ತಾನು ಮನೆಬಿಟ್ಟು ಹೋಗಲು ಕಾರಣವೇನು ಎಂದು ಪೊಲೀಸರ ಮುಂದೆ ದಿಗಂತ್ ಹೇಳಿದ್ದಾನೆ. ದ್ಚಿತೀಯ ಪಿಯುಸಿ ಪರೀಕ್ಷೆ ಭಯದಿಂದ ಮನೆಬಿಟ್ಟು ಹೋಗಿರುವುದಾಗಿ ಪೊಲೀಸರಿಗೆ ದಿಗಂತ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಫೆಬ್ರವರಿ 25ರಂದು ನಾಪತ್ತೆಯಾಗಿದ್ದ ದಿಗಂತ್ ಬರೊಬ್ಬರಿ 10 ದಿನಗಳ ಬಳಿಕ ಉಡುಪಿಯಲ್ಲಿ ಪತ್ತೆಯಾಗುವುದರೊಂದಿಗೆ ಅವನ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ನಾಪತ್ತೆಯಾದ ದಿನ ಮನೆ ಪಕ್ಕದ ಬಂಟ್ವಾಳದ ರೈಲ್ವೆ ಟ್ರ್ಯಾಕ್ ಬಳಿ ಹೋಗಿದ್ದ ದಿಗಂತ್ ಅಲ್ಲಿ ಚಪ್ಪಲಿ ಬಿಚ್ಚಿಟ್ಟು ಶೂ ಹಾಕಿಕೊಂಡು ಬಳಿಕ ಅಪರಿಚಿತರ ಜೊತೆ ಬೈಕ್ ಏರಿ ಮಂಗಳೂರಿಗೆ ಹೋಗಿದ್ದ. ರೈಲ್ವೆ ಹಳಿಯಲ್ಲಿ ದಿಗಂತ್‌ನ ಚಪ್ಪಲಿ ಇತ್ತು ಮತ್ತು ಅದಕ್ಕೆ ರಕ್ತ ಮೆತ್ತಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಈ ನಾಪತ್ತೆ ಪ್ರಕರಣ ನಾನಾ ರೀತಿಯ ಊಹಾಪೋಹಗಳಿಗೆ ಕಾರಣವಾಗಿತ್ತು. ಮಂಗಳೂರಿನಿಂದ ಬಸ್ ಶಿವಮೊಗ್ಗ ತಲುಪಿ, ಬಳಿಕ ಶಿವಮೊಗ್ಗದಿಂದ ಮೈಸೂರಿಗೆ ಹೋಗಿದ್ದಾನೆ. ಮೈಸೂರಿನಲ್ಲಿ ಟ್ರೈನ್ ಹತ್ತಿ ಬೆಂಗಳೂರಿಗೆ ಹೋಗಿದ್ದಾರೆ. ನಂದಿ ಬೆಟ್ಟಕ್ಕೆ ತೆರಳಿ, ಅಲ್ಲಿಯ ಹೊಟೇಲ್ ಒಂದರಲ್ಲಿ ಮೂರು ದಿನ ಕೆಲಸ ಮಾಡಿ 3,000 ರೂ. ಸಂಪಾದನೆ ಮಾಡಿದ್ದಾನೆ.
ನಂತರ ವಿವಿಧ ಕಡೆ ಸುತ್ತಾಟ ನಡೆಸಿ ಶನಿವಾರ ಬೆಂಗಳೂರಿನಿಂದ ಮುರುಡೇಶ್ವರ ಎಕ್ಸ್‌ಪ್ರೆಸ್ ಟ್ರೈನ್ ಹತ್ತಿ ಉಡುಪಿಗೆ ತುಲುಪಿದ್ದಾನೆ. ಶನಿವಾರ ಬೆಂಗಳೂರಿನಿಂದ ಮುರುಡೇಶ್ವರ ಎಕ್ಸ್‌ಪ್ರೆಸ್ ಟ್ರೈನ್ನಲ್ಲಿ ಹೋಗುವಾಗ ದಿಗಂತ್ ಪೊಲೀಸರ ಕಾರ್ಯಾಚರಣೆ ನೋಡಿದ್ದ. ರೈಲು ದಿಗಂತ್ ಮನೆ ಸಮೀಪವೇ ಹೋಗುತ್ತೆ. ಮನೆ ಸಮೀಪದಿಂದಲೇ ಹಾದುಹೋಗುತ್ತದೆ. ಆಗ ಕಿಟಕಿ ಬಳಿ ನಿಂತು ದಿಗಂತ್ ತನ್ನ ಮನೆ ನೋಡಿದ್ದ. ರೈಲು ಹಳಿ ಸುತ್ತಾಮುತ್ತಾ ಡ್ರೋನ್ ಹಾರಾಟ, ಪೊಲೀಸರ ಕೂಂಬಿಂಗ್ ಮಾಡುತ್ತಿದ್ದರು. ಪತ್ತೆಯಾದ ಬಳಿಕ ಪೊಲೀಸರಿಗೆ ಮನೆ ಬಳಿ ಇರುವ ಕೆರೆ ಹತ್ತಿರ ಏನಕ್ಕೆ ಅಗೆಯುತ್ತಿದ್ರಿ, ಹುಡುಕುತ್ತಿದ್ರಿ ಎಂದು ದಿಗಂತ್ ಪ್ರಶ್ನಿಸಿದ್ದಾನೆ.
ದಿಗಂತ್ ನಾಪತ್ತೆ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ದಿಗಂತ ನಾಪತ್ತೆ ಹಿಂದೆ ಗಾಂಜಾ ವ್ಯಸನಿಗಳ ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರವಾಗಿ ಹಿಂದುಪರ ಸಂಘಟನೆಗಳು ಮತ್ತು ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ದಿಗಂತ್ ಬಂಟ್ವಾಳ ತಾಲೂಕಿನ ಸಜಿಪ ಮೂಲದ ಮಂಗಳಮುಖಿಯ ಜೊತೆಗೆ ಹೋಗಿದ್ದಾನೆ ಎಂದು ವಂದತಿ ಹಬ್ಬಿತ್ತು. ಈ ಎಲ್ಲ ವಂದತಿಗಳಿಂದ ಪೋಷಕರು ಗಾಬರಿಗೊಂಡಿದ್ದರು. ನಿನ್ನೆ ಯುವಕನೊಬ್ಬ ಡಿಮಾರ್ಟ್‌ನಲ್ಲಿ ದಿಗಂತ್‌ನನ್ನು ನೋಡಿ ವಿಷಯ ತಿಳಿಸುತ್ತಿದ್ದಂತೆ ಪೊಲೀಸರ ಹುಡುಕಾಟ ಕೊನೆಗೊಂಡಿದೆ.