ಹೈಕೋರ್ಟಿನ ಮಹತ್ವದ ಆದೇಶ
ತಿರುವನಂತಪುರ: ಮದುವೆ ಮತ್ತಿತರ ಖಾಸಗಿ ಸಮಾರಂಭಗಳಲ್ಲಿ ಪ್ಲಾಸಿಕ್ ನೀರಿನ ಬಾಟಲಿ ಬಳಕೆ ಮಾಡಬಾರದು ಎಂದು ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಪರಿಸರದ ಬಗ್ಗೆ ಕಾಳಜಿ ವ್ಯಕ್ತಪಡಿಸಿರುವ ನ್ಯಾಯಾಲಯ ರಾಜ್ಯದಲ್ಲಿ ಮದುವೆ ಮತ್ತಿತರ ಸಮಾರಂಭದಲ್ಲಿ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಬಾರದು ಎಂದು ಹೇಳಿದೆ. ಸಣ್ಣ ಪ್ಲಾಸ್ಟಿಕ್ ಬಾಟಲಿಗಳು ಪ್ರಕೃತಿಗೆ ಹಾನಿಯನ್ನುಂಟುಮಾಡುತ್ತಿವೆ ಮತ್ತು ಯಾವುದೇ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು ಎಂದು ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ.
ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ಅನ್ನು ತೊಡೆದುಹಾಕಲು ಕಠಿಣ ಕ್ರಮಗಳು ಅಗತ್ಯವೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಪ್ಲಾಸ್ಟಿಕ್ ನೀರಿನ ಬಾಟಲಿಗಳ ಮೇಲಿನ ನಿಷೇಧವನ್ನು ಪ್ರಾಯೋಗಿಕವಾಗಿ ಹೇಗೆ ಜಾರಿಗೆ ತರಬಹುದು ಎಂದು ನ್ಯಾಯಾಲಯ ಪ್ರಶ್ನಿಸಿತು. ಘನತ್ಯಾಜ್ಯ ನಿರ್ವಹಣಾ ನಿಯಮಗಳು, 2016ಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ನ್ಯಾಯಾಲಯವು ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನಡೆಸುತ್ತಿತ್ತು.
100ಕ್ಕೂ ಹೆಚ್ಚು ಜನರು ಸೇರುವ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಮತ್ತಿತರ ಪರಿಕರಗಳನ್ನು ಬಳಸಲು ಪರವಾನಗಿ ಅಗತ್ಯ. ಸ್ಥಳೀಯ ಆಡಳಿತ ಸಂಸ್ಥೆಗಳು ಈ ಪರವಾನಗಿ ನೀಡುವ ಅಧಿಕಾರವನ್ನು ಹೊಂದಿವೆ ಎಂದು ಈ ವೇಳೆ ಸರಕಾರ ನ್ಯಾಯಾಲಯಕ್ಕೆ ತಿಳಿಸಿದೆ.
ಮದುವೆ, ಆರತಕ್ಷತೆ ಮುಂತಾದ ಖಾಸಗಿ ಸಮಾರಂಭಗಳಲ್ಲಿ ಅರ್ಧ ಲೀಟರ್ ನೀರಿನ ಬಾಟಲಿಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಸ್ಥಳೀಯ ಸ್ವ-ಸರ್ಕಾರಿ ಇಲಾಖೆಯ ವಿಶೇಷ ಕಾರ್ಯದರ್ಶಿ ತಿಳಿಸಿದರು.