ಪ್ರಯೋಗಾಲಯ ಪರೀಕ್ಷೆಯಲ್ಲಿ ದೃಢ, ಬ್ಯಾನ್‌ಗೆ ಶಿಫಾರಸ್ಸು
ಬೆಂಗಳೂರು: ಇಡ್ಲಿ, ಗೋಬಿಮಂಚೂರಿ, ಕಬಾಬ್ ಸೇರಿದಂತೆ ವಿವಿಧ ಆಹಾರ ವಸ್ತುಗಳಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕ ಅಂಶ ಪತ್ತೆಯಾದ ಬಳಿಕ ಈಗ ಕರಿದ ಹಸಿರು ಬಟಾಣಿಯಲ್ಲೂ ಕ್ಯಾನ್ಸರ್‌ಕಾರಕ ಅಂಶ ಇರುವುದು ಪ್ರಯೋಗಾಲಯದ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇತ್ತೀಚೆಗಷ್ಟೇ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸುವುದರಿಂದ ಕ್ಯಾನ್ಸರ್‌ಕಾರಕ ಅಂಶ ಬಿಡುಗಡೆಯಾಗಿ ಇಡ್ಲಿಯನ್ನು ಸೇರಿಕೊಳ್ಳುತ್ತಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಬಳಿಕ ಹೊಟೇಲ್, ಉಪಾಹಾರ ಮತ್ತು ತಿನಿಸು ಕೇಂದ್ರಗಳಲ್ಲಿ ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಹಾಳೆಯ ಬಳಕೆಯನ್ನು ನಿಷೇಧಿಸಲಾಗಿದೆ. ಇದರ ಬೆನ್ನಲ್ಲೇ ಈಗ ಬಟಾಣಿಯಲ್ಲಿ ಕೃತಕ ಕಲಬೆರಕೆ ಅಂಶ ಪತ್ತೆಯಾಗಿದೆ.
ಲ್ಯಾಬ್ ಪ್ರಾಥಮಿಕ ವರದಿಯಲ್ಲಿ ಕರಿದ ಬಟಾಣಿಯಲ್ಲಿ ಬ್ರಿಲಿಯಂಟ್ ಬ್ಲೂ ಟೆಟಾರ್ಜಿನ್ ಅಂದ್ರೆ ಹಳದಿ ಬಣ್ಣವಿರುವ ರಾಸಾಯನಿಕ ಇರುವುದು ಪತ್ತೆಯಾಗಿದೆ. ಈಗಾಗಲೇ ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್ ಬಟಾಣಿಗೆ ಕಲರ್ ಬಳಕೆ ಮಾಡುವುದನ್ನು ನಿಷೇಧಿಸಲು ಶಿಫಾರಸು ಮಾಡಿದ್ದಾರೆ.
ಕರಿದ ಬಟಾಣಿ ಟೈಮ್ ಪಾಸ್ ಆಹಾರವಾಗಿದೆ. ಶಾಲಾ, ಕಾಲೇಜುಗಳ ಬಳಿ ಸಣ್ಣ, ಸಣ್ಣ ಪ್ಲಾಸ್ಟಿಕ್ ಪಾಕೆಟ್‌ಗಳಲ್ಲಿ ಕರಿದ ಬಟಾಣಿ ಮಾರಾಟ ಮಾಡುತ್ತಾರೆ. ಗುಂಡುಪ್ರಿಯರು ಗುಂಡಿನ ಜೊತೆ ಬಟಾಣಿ ನೆಂಚಿಕೊಳ್ಳುತ್ತಾರೆ. ಬಾರ್ಗಳಲ್ಲಿ ಎಣ್ಣೆ ಜೊತೆ ಸ್ನ್ಯಾಕ್ಸ್ ಅಂತ ಈ ಬಟಾಣಿ ಕೊಡುತ್ತಾರೆ. ಬಟಾಣಿಗೆ ಹಸಿರು ಬಣ್ಣಬರಿಸಲು ರಾಸಾಯನಿಕ ಸೇರಿಸುವುದು ಪತ್ತೆಯಾಗಿದೆ.