ಬಜೆಟ್‌ ಮಂಡನೆಗೆ ಕ್ಷಣಗಣನೆ : ಕರಾವಳಿ ಜನರಲ್ಲಿದೆ ಬೆಟ್ಟದಷ್ಟು ನಿರೀಕ್ಷೆ

ಸಿದ್ದರಾಮಯ್ಯನವರ ದಾಖಲೆಯ 16ನೇ ಮುಂಗಡಪತ್ರ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಡಿಸಲಿರುವ ಬಜೆಟ್‌ಗೆ ಕ್ಷಣಗಣನೆ ಆರಂಭವಾಗಿದೆ. 2025ನೇ ಸಾಲಿನ ಕರ್ನಾಟಕ ಬಜೆಟ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಸಿದ್ದರಾಮಯ್ಯನವರು ಬೆಳಗ್ಗೆ 9.30ಕ್ಕೆ ಸಚಿವ ಸಂಪುಟ ನಡೆಸಲಿದ್ದು, ಸಭೆಯಲ್ಲಿ ಬಜೆಟ್​ಗೆ ಅನುಮೋದನೆ ಪಡೆದುಕೊಳ್ಳಲಿದ್ದಾರೆ. ಬಳಿಕ ಬೆಳಗ್ಗೆ 10.30ಗೆ ಬಜೆಟ್​ ಮಂಡನೆ ಮಾಡಲಿದ್ದಾರೆ. ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ತಮ್ಮ ದಾಖಲೆಯನ್ನೇ ಮುರಿದು 16ನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಮಂಡಿನೋವಿನ ಕಾರಣದಿಂದ ನಿಂತು ಬಜೆಟ್ ಮಂಡಿಸುವ ಬದಲು ಕುಳಿತು ಬಜೆಟ್ ಓದುವ ಸಾಧ್ಯತೆ ಇದೆ. ಬಜೆಟ್ ಗಾತ್ರ 4 ಲಕ್ಷ ಕೋಟಿ ಮೀರುವ ಸಾಧ್ಯತೆ ಇದೆ.

ಗ್ಯಾರಂಟಿ ಯೋಜನೆಗಳಿಗೆ ಬರೋಬ್ಬರಿ 52 ಸಾವಿರ ಕೋಟಿಗೂ ಹೆಚ್ಚು ಮೊತ್ತವನ್ನು ವ್ಯಯಿಸುತ್ತಿರುವ ಸರ್ಕಾರದ ಮೇಲೆ ಈ ಬಾರಿ ಬಹಳ ನಿರೀಕ್ಷೆ ಗರಿಗೆದರಿದೆ.‌ ಕಳೆದ ಆರ್ಥಿಕ ವರ್ಷದಲ್ಲಿ ಶೇ.61ರಷ್ಟು ಮಾತ್ರ ಆರ್ಥಿಕ ಪ್ರಗತಿ ಹಾಗೂ ಇಲಾಖಾವಾರು ಪ್ರಗತಿ ಕಂಡಿರುವ ಸರ್ಕಾರ ಇನ್ನೂ ಸಾಧಿಸುವುದು ಬೆಟ್ಟದಷ್ಟಿದೆ. ಸಾಲು ಸಾಲು ಗ್ಯಾರಂಟಿಗಳ ಜೊತೆಗೆ ಆಯವ್ಯಯದ ಲೆಕ್ಕ ಮಂಡಿಸಲು ಸಿಎಂ ಸಿದ್ದರಾಮಯ್ಯ ಸಜ್ಜಾಗಿದ್ದಾರೆ.































 
 

ಗ್ಯಾರಂಟಿ ಯೋಜನೆ ಮುಂದುವರಿಸುವ ಜೊತೆಗೆ ಹೊಸ ವಿಶೇಷವಾದ ಯೋಜನೆಗಳನ್ನು ನೀಡಬೇಕು. ಗ್ಯಾರಂಟಿ ಜೊತೆಗೆ ರಾಜ್ಯದ ಆರ್ಥಿಕತೆಗೆ ಅಭಿವೃದ್ಧಿಗೆ ಸಾಮಾಜಿಕ ಏಳಿಗೆಗೆ ಕೊಡುಗೆ ನೀಡುವಂತ ಯೋಜನೆಗಳನ್ನು ಬಜೆಟ್‌ನಲ್ಲಿ ಮಂಡಿಸಬೇಕಿದೆ. ರಾಜ್ಯದ ಆರ್ಥಿಕ ಸ್ಥಿತಿ ಸರಿಯಿಲ್ಲದ ಹೊತ್ತಲ್ಲಿ ಸರ್ಕಾರ ಎಷ್ಟು ಮೊತ್ತದ ಹೊಸ ಸಾಲವನ್ನು ಮಾಡುತ್ತದೆ ಎಂಬ ಆತಂಕವೂ ಇದೆ. ಹೊಸ ಜಿಲ್ಲೆ, ಹೊಸ ತಾಲೂಕುಗಳ ಘೋಷಣೆಯಾದರೆ ಅವುಗಳ ಅಭಿವೃದ್ಧಿಗೂ ಹಣ ನೀಡಬೇಕಿದೆ. ಸಮಸ್ಯೆಗಳ ಕೂಪದಲ್ಲಿ ಮುಳುಗಿ ಹೋಗಿ ಒದ್ದಾಡುತ್ತಿರುವ ರಾಜ್ಯದ ಜನರಿಗೆ ಹೊಸ ಅಭಿವೃದ್ಧಿ ಯೋಜನೆಗಳ ಸಿಂಚನವನ್ನು ಸಿದ್ದರಾಮಯ್ಯ ಮಾಡುತ್ತಾರಾ ಎನ್ನುವ ಕುತೂಹಲ ಇದೆ.

ಕರಾವಳಿಗೆ ಸಿಗಬಹುದೇ ಕೊಡುಗೆ?

ಕರಾವಳಿ ಭಾಗಕ್ಕೆ ಬಜೆಟ್‌ನಲ್ಲಿ ಏನು ಕೊಡುಗೆ ಸಿಗಬಹುದು ಎಂಬ ಕುತೂಹಲ ಈ ಭಾಗದ ಜನರಲ್ಲಿದೆ. ದ.ಕ. ಮತ್ತು ಉಡುಪಿಯಲ್ಲಿ ಬಿಜೆಪಿ ಶಾಸಕರೇ ಹೆಚ್ಚು ಇರುವುದರಿಂದ ಕೊಡುಗೆಯಲ್ಲಿ ಸಿದ್ದರಾಮಯ್ಯ ತಾರತಮ್ಯ ಮಾಡುತ್ತಿದ್ದಾರೆ ಎಂಬ ಆರೋಪ ಇದೆ. ಕಳೆದ ಬಜೆಟ್‌ನಲ್ಲಿ ಸಿದ್ದರಾಮಯ್ಯ ಕರಾವಳಿಗೆ ವಿಶೇಷವಾಗಿ ಏನನ್ನೂ ಕೊಟ್ಟಿರಲಿಲ್ಲ. ಬಜೆಟ್‌ ಧಿವೇಶನದ ಆರಂಭದಲ್ಲೆ ಉಪಮುಖ್ಯಮಂತ್ರಿ ಡಿ.ಕೆ.ಶೀವಕುಮಾರ್‌ ಕರಾವಳಿಯ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುತ್ತೇವೆ ಎಂದಿರುವುದು ಕನಿಷ್ಠ ಈ ಕ್ಷೆತ್ರಕ್ಕಾದರೂ ವಿಶೇಷ ಕೊಡುಗೆಗಳು ಸಿಗಬಹುದು ಎಂಬ ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಕರಾವಳಿಯಲ್ಲಿ ಸಮಸ್ಯೆಗಳು ಬೆಟ್ಟದಷ್ಟಿವೆ. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿಯಲ್ಲಿ ಉಡುಪಿ ಮತ್ತು ದ.ಕ. ಜಿಲ್ಲೆಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಯಾವುದೇ ಹೊಸ ಯೋಜನೆ ಕರಾವಳಿಗೆ ಘೋಷಣೆಯಾಗಿಲ್ಲ, ಹಿಂದಿನ ಬಿಜೆಪಿ ಸರಕಾರ ಘೋಷಿಸಿದ ಯೋಜನೆಗಳಿಗೂ ಅನುದಾನ ಕೊಡುತ್ತಿಲ್ಲ ಎಂಬ ಕೂಗು ಇದೆ. ಇವುಗಳಿಎಗೆಲ್ಲ ಬಜೆಟ್‌ನಲ್ಲಿ ಉತ್ತರ ಸಿಗಬಹುದು ಎಂಬ ನಿರೀಕ್ಷೆ ಕರಾವಳಿ ಭಾಗದ ಜನರದ್ದು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top