ಬೆಂಗಳೂರು: ಕರ್ನಾಟಕ ಸರ್ಕಾರ ಮಂಡಿಸಿದ 2025-26ನೇ ಸಾಲಿನ ಬಜೆಟ್ ಗ್ರಾಮೀಣ ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆಗೆ ತೀವ್ರ ನಿರಾಸೆಯನ್ನುಂಟುಮಾಡಿದೆ. ಗ್ರಾಮ ಪಂಚಾಯತ್ ಸದಸ್ಯರ ಭತ್ಯೆ, ಪ್ರಯಾಣ ಭತ್ಯೆ , ದೂರವಾಣಿ ಭತ್ಯೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಬಗ್ಗೆ ಸರ್ಕಾರ ಯಾವುದೇ ಅನುದಾನ ನೀಡಿಲ್ಲ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಲು ಹೊಸ ಯೋಜನೆಗಳೇ ಇಲ್ಲ. ನಕ್ಸಲ್ ಪ್ರಭಾವಿತ ಗ್ರಾಮಗಳಿಗೆ ಸಹಾಯ ಪ್ಯಾಕೇಜ್ ನೀಡುವ ಬದಲು ಸಂಪೂರ್ಣ ನಿರ್ಲಕ್ಷ್ಯ ತೋರಲಾಗಿದೆ.
ಈ ಬಜೆಟ್ ಕನ್ನಡಿಗರ ಅಭಿವೃದ್ಧಿಗೆ ಏನೂ ಕೊಟ್ಟಿಲ್ಲ. ಇದು ಮತಬ್ಯಾಂಕ್ ರಾಜಕಾರಣಕ್ಕೆ ಅನುಕೂಲವಾಗುವಂತೆಯೇ ರೂಪಿಸಲಾಗಿದೆ. ರಾಜ್ಯದ ಸಾರ್ವಜನಿಕ ಬಂಡವಾಳವನ್ನು ನಿರ್ದಿಷ್ಟ ಸಮುದಾಯಕ್ಕೆ ಮೀಸಲಿಟ್ಟಿದ್ದು, ಕನ್ನಡಿಗರ ಹಿತದೃಷ್ಠಿಯಿಂದ ಯಾವುದೇ ಪ್ರಗತಿಪರ ಯೋಜನೆಗಳನ್ನು ಈ ಬಜೆಟ್ ಒಳಗೊಂಡಿಲ್ಲ. ರಾಜ್ಯದಲ್ಲಿ ಸಮಗ್ರ ಪ್ರಗತಿಗೆ ಮುನ್ನಡೆಸುವ ಬದಲು, ಮತಬ್ಯಾಂಕ್ ರಾಜಕೀಯವನ್ನೇ ಆದ್ಯತೆ ನೀಡಲಾಗಿದೆ.
ಆದಾಗ್ಯೂ, ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜು ಅನುಮೋದನೆಗೆ ನಾವು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ. ಈ ನಿರ್ಧಾರವು ದಕ್ಷಿಣ ಕನ್ನಡ ಜಿಲ್ಲೆ ಹಾಗು ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ. ಆದರೆ! ಬಜೆಟ್ ನಲ್ಲಿ ಯೋಜನೆಗೆ ಅನುದಾನ ಮೀಸಲಿಡದೇ ಇರುವುದು ಬಹಳ ಬೇಸರ ಉಂಟು ಮಾಡಿದೆ. ಕಾಲೇಜಿನ ಘೋಷಣೆಯ ಜೊತೆಗೆ ಅನುದಾನವನ್ನು ಕೂಡ ಮೀಸಲಿಟ್ಟಿದ್ದಲ್ಲಿ ಜನತೆಗೆ ಸಂತಸ ತರುತ್ತಿತ್ತು.
ಉಡುಪಿಗೆ ಹೊಸ ತೀವ್ರ ನಿಗಾ ಘಟಕ ನಿರ್ಮಿಸಲು ಅನುದಾನ ಒದಗಿಸಲಾಗಿದೆ. ಶಾಲಾ ಮೂಲಸೌಕರ್ಯ ಅಭಿವೃದ್ಧಿಗೆ ₹850 ಕೋಟಿ ಮೀಸಲಿರಿಸಲಾಗಿದೆ, ಆದರೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಕ್ಷೇತ್ರಕ್ಕೆ ಸಮರ್ಪಕ ಹೂಡಿಕೆ ಆಗುತ್ತಿದೆಯಾ ಎಂಬ ಪ್ರಶ್ನೆ ಉಳಿದಿದೆ.
ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ₹200 ಕೋಟಿ ಮೀಸಲಾಗಿದೆಯಾದರೂ, ಮಂಗಳೂರು ವಿಮಾನ ನಿಲ್ದಾಣಕ್ಕೆ ಯಾವುದೇ ಹೊಸ ಅನುದಾನವಿಲ್ಲ. ಕರಾವಳಿ ಭಾಗದ ರಸ್ತೆ ಅಭಿವೃದ್ಧಿಗೆ ಸರ್ಕಾರ ಸ್ಪಷ್ಟ ನೀತಿಯನ್ನು ತೆಗೆದುಕೊಂಡಿಲ್ಲ.
ಈ ಬಜೆಟ್ ಮುಸ್ಲಿಂ ಸಮುದಾಯಕ್ಕೆ ಅನೇಕ ಸೌಲಭ್ಯಗಳನ್ನು ನೀಡಿದ್ದು, ಹಿಂದೂ ಸಮುದಾಯಕ್ಕೆ ನಿರ್ಲಕ್ಷ್ಯ ತೋರಲಾಗಿದೆ. ಮುಸ್ಲಿಂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನ, ಉದ್ಯೋಗ ಪ್ಯಾಕೇಜ್, ಹೊಸ ವಕ್ಫ್ ಬೋರ್ಡ್ ಅಭಿವೃದ್ಧಿ ಸೇರಿದಂತೆ ಹಲವಾರು ಘೋಷಣೆಗಳು ಮಾಡಲಾಗಿದೆ. ಇದರಲ್ಲಿ ಮುಖ್ಯವಾಗಿ, ಸರ್ಕಾರ ಮುಸ್ಲಿಂ ಸಮುದಾಯದ ಗುತ್ತಿಗೆದಾರರಿಗೆ ಸರ್ಕಾರಿ ಯೋಜನೆಗಳಲ್ಲಿ ವಿಶೇಷ ಮೀಸಲಾತಿ ನೀಡಿದೆ, ಆದರೆ ಹಿಂದೂ ಸಮುದಾಯದ ಉದ್ಯಮಿಗಳಿಗೆ ಈ ಸೌಲಭ್ಯವಿಲ್ಲ. ಹಿಂದೂ ಧಾರ್ಮಿಕ ಸಂಸ್ಥೆಗಳು, ಮಠ-ಮಂದಿರಗಳ ಅಭಿವೃದ್ಧಿಗೆ ಯಾವುದೇ ವಿಶೇಷ ಅನುದಾನವಿಲ್ಲ.
ಇದರ ಜೊತೆಗೆ ನಕ್ಸಲ್ ಶರಣಾಗತಿ ಬಳಿಕ, ANF (Anti-Naxal Force) ನ ಗೌರವವನ್ನು ಕುಗ್ಗಿಸುವಂತಹ ಕ್ರಮಗಳು ತೆಗೆದುಕೊಳ್ಳಲಾಗಿದೆ. ನಕ್ಸಲ್ ಪ್ರಭಾವಿತ ಗ್ರಾಮಗಳಿಗೆ ಯಾವುದೇ ಪುನರ್ವಸತಿ ಪ್ಯಾಕೇಜ್ ನೀಡಲಾಗಿಲ್ಲ. ಸರ್ಕಾರ ಈ ಪ್ರದೇಶದ ಜನರ ಕಷ್ಟಗಳನ್ನು ಮರೆತು, ನಕ್ಸಲ್ ಬೆಂಬಲಿತ ಗುಂಪುಗಳನ್ನೇ ಪ್ರೋತ್ಸಾಹಿಸುವ ನಿಲುವನ್ನು ತಾಳಿ ನಡೆಸಿದೆ.
ಒಟ್ಟಾರೆ, ಈ ಬಜೆಟ್ ಕನ್ನಡಿಗರಿಗೆ ತೀವ್ರ ನಿರಾಸೆ ಮೂಡಿಸಿದೆ. ಮೂಲಭೂತ ಸೌಕರ್ಯ, ಉದ್ಯೋಗ ಸೃಷ್ಟಿ, ಕೈಗಾರಿಕಾ ವಲಯದ ವೃದ್ಧಿ ಮುಂತಾದವುಗಳ ಕಡೆ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ತೋರಿಸಿದೆ. ರಾಜಕೀಯ ಲಾಭಕ್ಕಾಗಿ ಕನ್ನಡಿಗರನ್ನು ಕಡೆಗಣಿಸುವ ಈ ಸರ್ಕಾರದ ನಿಲುವು ಖಂಡನೀಯ. ನಮ್ಮ ಹಕ್ಕುಗಳಿಗಾಗಿ ನಾವು ಹೋರಾಟ ಮುಂದುವರಿಸುತ್ತೇವೆ.