ಸದ್ಯಕ್ಕೆ ತಾಲೂಕು ಆಸ್ಪತ್ರೆಯ ಉನ್ನತೀಕರಣ ಮಾತ್ರ
ಬೆಂಗಳೂರು: ಪುತ್ತೂರಿನಲ್ಲಿ ಹೊಸ ಮೆಡಿಕಲ್ ಕಾಲೇಜು ಸ್ಥಾಪಿಸುವ ಉದ್ದೇಶ ಇದೆ ಎಂದು ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಈ ಸಾಲಿನ ಬಜೆಟ್‌ನಲ್ಲಿ ಹೊಸ ಮೆಡಿಕಲ್ ಕಾಲೇಜು ಘೋಷಿಸಿಲ್ಲ.
ಮೆಡಿಕಲ್ ಕಾಲೇಜು ಘೋಷಣೆಗೆ ಪೂರಕವಾಗಿ ಪುತ್ತೂರಿನಲ್ಲಿ ಈಗಿರುವ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆಯನ್ನು ಉನ್ನತೀಕರಿಸಲಾಗುವುದು ಎಂದು ಘೋಷಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಈ ಸಲ ಪುತ್ತೂರಿಗೆ ಮೆಡಿಕಲ್ ಕಾಲೇಜು ಘೋಷಣೆಯಾಗುವುದು ಖಚಿತ ಎಂಬ ವದಂತಿ ದಟ್ಟವಾಗಿ ಹರಡಿತ್ತು.
ಇದಕ್ಕೆ ಪೂರಕವಾಗಿ ಪುತ್ತೂರಿನ ಸಾಕಷ್ಟು ಮಂದಿ ಬೆಂಗಳೂರಿಗೂ ಹೋಗಿ ಬಂದಿದ್ದರು ಎನ್ನಲಾಗಿದೆ. ಮೆಡಿಕಲ್ ಕಾಲೇಜು ಘೋಷಣೆಯಾದರೆ ಸಂಭ್ರಮಾಚರಣೆ ಮಾಡಲು ಕೂಡ ತಯಾರಿ ನಡೆದಿತ್ತು ಎನ್ನಲಾಗಿದೆ. ಆದರೆ ಈಗ ಇವೆಲ್ಲದಕ್ಕೆ ತಣ್ಣೀರು ಎರಚಿದಂತಾಗಿದೆ. ಮುಂದೆ ಎಂದಾದರೂ ಒಂದು ದಿನ ಪುತ್ತೂರಿಗೆ ಮೆಡಿಕಲ್ ಕಾಲೇಜು ಬರಬಹುದು ಎಂಬ ದೂರದ ಆಶೆಯೊಂದೇ ಈಗ ಉಳಿದುಕೊಂಡಿರುವ ನಿರೀಕ್ಷೆ.