ಮದ್ಯದ ಬೆಲೆ ಮತ್ತೆ ಹೆಚ್ಚಾಗುವ ಸಾಧ್ಯತೆ
ಬೆಂಗಳೂರು: ಅಬಕಾರಿ ಇಲಾಖೆಗೆ 40,000 ಕೋಟಿ ರೂ. ರಾಜಸ್ವ ಸಂಗ್ರಹ ಗುರಿಯನ್ನು ಸಿದ್ದರಾಮಯ್ಯ ಈ ಸಾಲಿನ ಬಜೆಟ್‌ನಲ್ಲಿ ನೀಡಿದ್ದಾರೆ. ಇಷ್ಟು ಮೊತ್ತ ಸಂಗ್ರಹವಾಗಬೇಕಾದರೆ ಅಬಕಾರಿ ಇಲಾಖೆ ಮದ್ಯ ಮಾರಾಟವನ್ನು ಹೆಚ್ಚು ಮಾಡಬೇಕು ಮತ್ತು ಜೊತೆಗೆ ಮದ್ಯದ ಬೆಲೆಯನ್ನು ಹೆಚ್ಚಿಸಬೇಕು. ಹೀಗಾಗಿ ರಾಜ್ಯದಲ್ಲಿ ಮದ್ಯ ಮತ್ತೆ ದುಬಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
2024-25ರ ಪರಿಷ್ಕೃತ ಅಂದಾಜಿನಲ್ಲಿ ಅಬಕಾರಿ ತೆರಿಗೆಯಿಂದ ಒಟ್ಟು 36,500 ಕೋಟಿ ರೂ.ಗಳ ರಾಜಸ್ವ ನಿರೀಕ್ಷಿಸಲಾಗಿದೆ. ಅದರಂತೆ 2025-26ನೇ ಸಾಲಿಗೆ 40,000 ಕೋಟಿ ರೂ.ಗಳ ಸಂಗ್ರಹಣಾ ಗುರಿಯನ್ನು ಅಬಕಾರಿ ಇಲಾಖೆಗೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಪ್ರೀಮಿಯಂ ಮದ್ಯದ ಬೆಲೆಗಳನ್ನು ನೆರೆಯ ರಾಜ್ಯಗಳಲ್ಲಿ ವಿಧಿಸುತ್ತಿರುವ ಬೆಲೆಗಳಿಗೆ ಅನುಸಾರವಾಗಿ ಪರಿಷ್ಕರಿಸುವುದರೊಂದಿಗೆ ಸರ್ಕಾರ ಅಬಕಾರಿ ಸ್ಲ್ಯಾಬ್‌ಗಳನ್ನು ತರ್ಕಬದ್ಧಗೊಳಿಸಿದೆ. 2025-26ರಲ್ಲಿಯೂ ಅಬಕಾರಿ ಸ್ಲ್ಯಾಬ್‌ಗಳನ್ನು ತರ್ಕಬದ್ಧಗೊಳಿಸುವ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು ಎಂದು ವಿವರಿಸಿದ್ದಾರೆ. ಖಾಲಿ ಅಥವಾ ಲಭ್ಯವಿರುವ ಮದ್ಯದ ಪರವಾನಗಿಗಳನ್ನು ಪಾರದರ್ಶಕ ಇ-ಹರಾಜಿನ (ಆನ್‌ಲೈನ್) ಮೂಲಕ ಹಂಚಿಕೆ ಮಾಡಲು ಪ್ರಸ್ತಾಪಿಸಲಾಗಿದೆ. ಇದರಿಂದ ಹೆಚ್ಚುವರಿ ರಾಜಸ್ವ ಸಂಗ್ರಹಣೆಯಾಗುವ ನಿರೀಕ್ಷೆಯಿದೆ. ಇಲಾಖೆಯ ಎಲ್ಲ ಸೇವೆಗಳಿಗೆ ಸರ್ಕಾರ ತಂತ್ರಾಂಶ ಸಿದ್ಧಪಡಿಸಿ ಆನ್‌ಲೈನ್ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದೆ. ಇದು ಆಡಳಿತದಲ್ಲಿ ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಸಾರ್ವಜನಿಕ ಸೇವೆಯನ್ನು ಮತ್ತಷ್ಟು ಸುಧಾರಿಸಲು ಸಹಕಾರಿಯಾಗಲಿದೆ ಎಂದು ಸಿಎಂ ತಿಳಿಸಿದ್ದಾರೆ.