ಪುತ್ತೂರು: ಪುತ್ತೂರು ಬಿಜೆಪಿ ಮಹಿಳಾ ಮೋರ್ಚಾದಿಂದ ಮಹಿಳಾ ದಿನಾಚರಣೆ ಗುರುವಾರ ಪುತ್ತೂರು ಬಿಜೆಪಿ ಕಚೇರಿಯಲ್ಲಿ ನಡೆಯಿತು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿದ್ಯಾ ಆರ್. ಗೌರಿ ಪ್ರಾಸ್ತಾವಿಕವಾಗಿ ಮಾತನಾಡಿ, ವೇತನ, ರಜೆ, ಮೂಲಭೂತ ಸೌಲ್ಯಗಳನ್ನು ಪಡೆದುಕೊಳ್ಳುವಲ್ಲಿ ತಾರತಮ್ಯ ಧೋರಣೆ ಇದ್ದ ಸಂದರ್ಭದಲ್ಲಿ ಪುರುಷರಷ್ಟೇ ಸಮಾನ ಹಕ್ಕುಗಳನ್ನು ಪಡೆದುಕೊಳ್ಳಲು 1909 ರಲ್ಲಿ ಮಹಿಳೆಯರು ದಂಗೆ ಎದ್ದು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ಪ್ರತಿಭಟನೆ ಮಾಡಿ ಇದೊಂದು ಕ್ರಾಂತಿಯಾದ ಪರಿಣಾಮ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಯಿತು. ಮೋದಿ ಸರಕಾರ ಬಂದ ನಂತರ ಮಹಿಳಾ ಸಬಲೀಕರಣಗೊಳ್ಳುವಲ್ಲಿ ಜಾರಿಗೆ ತಂದ ಯೋಜನೆಗಳು ಶ್ಲಾಘನೀಯವಾಗಿದ್ದು, ಮೋದಿ ಸರಕಾರ ಬರುವ ಮೊದಲು ಶೌಚಾಲಯದ ಕೊರತೆ ಎದ್ದು ಕಾಣುತ್ತಿತ್ತು. ಇದೀಗ ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ಶೌಚಾಲಯದ ಕೊರತೆ ಈಡೇರಿದೆ ಎಂದ ಅವರು, ಮಹಿಳೆ ಶಿಕ್ಷಣ, ಜ್ಞಾನ, ಆರ್ಥಿಕವಾಗಿ ಸ್ವಾವಲಂಬಿಯಾದರೆ ಉತ್ತಮ ಜೀವನ ಸಾಧ್ಯ ಎಂದರು.
ಡಾ.ಸ್ವಾತಿ ಆರ್. ಭಟ್ ಅಂಗಾಂಗ ದಾನದ ಕುರಿತು ಮಾಹಿತಿ ನೀಡಿ, ಜಗತ್ತಿನಲ್ಲಿ ಮಹಿಳೆಯರೇ ಉತ್ತಮ ಡೋನರ್ ಆಗಿದ್ದಾರೆ. ಮುಖ್ಯವಾಗಿ ಅಂಗಾಂಗ ದಾನಗಳಲ್ಲಿ ಎರಡು ರೀತಿ ಇದ್ದು, ಬದುಕಿದ್ದಾಗ ಮತ್ತು ಸತ್ತಾಗ ದಾನ ಮಾಡುವ ಅಂಗಾಂಗಗಳ ಕುರಿತು, ಅದಕ್ಕಿರುವ ಕಾನೂನಿನ ಚೌಕಟ್ಟು ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡಿದರು.
ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಖಿತಾ ಶೆಟ್ಟಿ ಕೇಂದ್ರ
ಸರಕಾರದ ಹಲವಾರು ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಪುತ್ತೂರು ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಹಿರಿಯರಾದ ಡಾ.ಎಂ.ಕೆ.ಪ್ರಸಾದ್, ಬಿಜೆಪಿ ನಗರ ಹಾಗೂ ಗ್ರಾಮಾಂತರ ಮಂಡಲ ಪದಾಧಿಕಾರಿಗಳು, ಮಹಿಳಾ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಹಿಳಾ ಮೋರ್ಚಾದ ವಿಮಲಾ ಸುರೇಶ್ ಕಾರ್ಯಕ್ರಮ ಸ್ವಾಗತಿಸಿ, ಜಯಲಕ್ಷ್ಮಿ ಶಗ್ರಿತ್ತಾಯ ಮಹಿಳಾ ಮೋರ್ಛ ಪ್ರಧಾನ ಕಾರ್ಯದರ್ಶಿ ವಂದಿಸಿದರು.